Updated on: Jan 08, 2024 | 12:23 PM
ರಾಯ್ಪುರದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ ಗ್ರೂಪ್-ಸಿ ಪಂದ್ಯದಲ್ಲಿ ಅಸ್ಸಾಂ ತಂಡದ ಯುವ ಬ್ಯಾಟ್ಸ್ಮನ್ ರಿಯಾನ್ ಪರಾಗ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಛತ್ತೀಸ್ಗಢ್ ವಿರುದ್ಧದ ಈ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಪರಾಗ್ ಅಕ್ಷರಶಃ ಅಬ್ಬರಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಛತ್ತೀಸ್ಗಢ್ ತಂಡವು 327 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಅಸ್ಸಾಂ ಕೇವಲ 159 ರನ್ಗಳಿಗೆ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ಫಾಲೋಆನ್ ಹೇರುವ ಮೂಲಕ ಅಸ್ಸಾಂ ತಂಡವನ್ನು ದ್ವಿತೀಯ ಇನಿಂಗ್ಸ್ಗೆ ಆಹ್ವಾನಿಸಿತು.
ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಅಸ್ಸಾಂ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 78 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ಗೆ ಆಗಮಿಸಿದ ರಿಯಾನ್ ಪರಾಗ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೇ ಛತ್ತೀಸ್ಗಢ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ರಿಯಾನ್ ಪರಾಗ್ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಅಮೋಘ ಬ್ಯಾಟಿಂಗ್ ಮುಂದುವರೆಸಿದ ಪರಾಗ್ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಅಂತಿಮವಾಗಿ 87 ಎಸೆತಗಳನ್ನು ಎದುರಿಸಿದ ರಿಯಾನ್ ಪರಾಗ್ 12 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 155 ರನ್ ಬಾರಿಸಿ ಔಟಾದರು. ಪರಾಗ್ ಅವರ ಈ ಭರ್ಜರಿ ಶತಕದ ನೆರವಿನಿಂದ ಅಸ್ಸಾಂ ತಂಡ ದ್ವಿತೀಯ ಇನಿಂಗ್ಸ್ನಲ್ಲಿ 254 ರನ್ ಕಲೆಹಾಕಿತು.
ಅಂದಹಾಗೆ ರಣಜಿ ಟೂರ್ನಿಯಲ್ಲಿ ಅತೀ ವೇಗದ ಶತಕ ಬಾರಿಸಿದ ದಾಖಲೆ ರಿಷಭ್ ಪಂತ್ ಹೆಸರಿನಲ್ಲಿದೆ. 2016 ರಲ್ಲಿ ಛತ್ತೀಸ್ಗಢ್ ವಿರುದ್ಧ ಪಂತ್ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿ ದಾಖಲೆ ಬರೆದಿದ್ದಾರೆ.