ಆಸ್ಟ್ರೇಲಿಯಾ ಅಂಗಳದಲ್ಲಿ ಭರ್ಜರಿ ದಾಖಲೆ ಬರೆದ ರೋಹಿತ್ ಶರ್ಮಾ
Rohit Sharma Records: ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಸಿಡಿಲಬ್ಬರ ಮುಂದುವರೆದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಹಿಟ್ಮ್ಯಾನ್ ಇದೀಗ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ. ಈ ಅರ್ಧಶತಕದೊಂದಿಗೆ ಭರ್ಜರಿ ದಾಖಲೆಯೊಂದನ್ನು ಸಹ ನಿರ್ಮಿಸಿದ್ದಾರೆ.
Updated on:Oct 23, 2025 | 12:26 PM

ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 97 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 73 ರನ್ ಬಾರಿಸಿದರು. ಈ 73 ರನ್ಗಳೊಂದಿಗೆ ಆಸ್ಟ್ರೇಲಿಯಾದಲ್ಲಿ ಆಸೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡರು.

ಅಂದರೆ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ಪಿಚ್ನಲ್ಲಿ ಏಕದಿನ ಪಂದ್ಯಗಳ ಮೂಲಕ ಭಾರತದ ಯಾವುದೇ ಬ್ಯಾಟರ್ 1000 ರನ್ ಗಳಿಸಿರಲಿಲ್ಲ. ಆದರೆ ಇದೀಗ 73 ರನ್ ಸಿಡಿಸುವುದರೊಂದಿಗೆ ರೋಹಿತ್ ಶರ್ಮಾ ಆಸೀಸ್ ಪಿಚ್ನಲ್ಲಿ ಏಕದಿನ ಪಂದ್ಯಗಳಲ್ಲಿ ಸಾವಿರ ರನ್ ಪೂರೈಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ 21 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 4 ಭರ್ಜರಿ ಶತಕ ಹಾಗೂ 3 ಅರ್ಧ ಶತಕಗಳೊಂದಿಗೆ ಒಟ್ಟು 1033* ರನ್ ಕಲೆಹಾಕಿದ್ದಾರೆ. ಈ ವೇಳೆ ಹಿಟ್ಮ್ಯಾನ್ ಬ್ಯಾಟ್ನಿಂದ 83 ಫೋರ್ ಹಾಗೂ 31 ಸಿಕ್ಸರ್ಗಳು ಕೂಡ ಮೂಡಿಬಂದಿವೆ.

ಇನ್ನು ಆಸ್ಟ್ರೇಲಿಯಾ ವಿರುದ್ಧ ಆಸೀಸ್ ಪಿಚ್ನಲ್ಲಿ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿ ಈವೆರೆಗೆ 20 ಪಂದ್ಯಗಳನ್ನಾಡಿದ್ದು, ಈ ವೇಳೆ 3 ಶತಕ ಹಾಗೂ 4 ಅರ್ಧಶತಕಗಳೊಂದಿಗೆ ಒಟ್ಟು 802 ರನ್ ಕಲೆಹಾಕಿದ್ದಾರೆ.
Published On - 12:23 pm, Thu, 23 October 25




