Updated on: Jun 12, 2023 | 10:08 PM
ಹೊಸ ನಾಯಕ...ಹೊಸ ಕೋಚ್...ಹೊಸ ತಂಡವನ್ನು ಕಣಕ್ಕಿಳಿಸಿದರೂ ಟೀಮ್ ಇಂಡಿಯಾದ ಐಸಿಸಿ ಟ್ರೋಫಿ ಗೆಲ್ಲುವ ಕನಸು ಮಾತ್ರ ಈಡೇರಿಲ್ಲ. 2021ರ ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮೇಜರ್ ಸರ್ಜರಿ ಮಾಡಲಾಗಿತ್ತು.
ಈ ಮಹತ್ವದ ಬದಲಾವಣೆಯಲ್ಲಿ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲಾಗಿತ್ತು. ಅತ್ತ ರವಿಶಾಸ್ತ್ರಿ ಬದಲಿಗೆ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ನೇಮಿಸಲಾಗಿತ್ತು.
ಏಷ್ಯಾಕಪ್, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಏಕದಿನ ವಿಶ್ವಕಪ್ ಅನ್ನು ಮುಂಗಂಡು ಮಾಡಲಾಗಿದ್ದ ಈ ಬದಲಾವಣೆ ಇದುವರೆಗೆ ಫಲ ಕೊಟ್ಟಿಲ್ಲ. ಏಕೆಂದರೆ ಆಡಿರುವ ಎರಡು ಪ್ರಮುಖ ಟೂರ್ನಿಗಳ ಫಲಿತಾಂಶಗಳು ಹೊರಬಿದ್ದಿದೆ.
ಏಷ್ಯಾಕಪ್ನಲ್ಲಿ ಸೂಪರ್-4 ಹಂತದಿಂದ ಹೊರಬಿದ್ದಿದ್ದ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ. ಇದರೊಂದಿಗೆ 2013 ರ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಟೀಮ್ ಇಂಡಿಯಾ ಕನಸು ಕೂಡ ಕಮರಿದೆ.
ಇದಾಗ್ಯೂ ಇನ್ನೊಂದು ದೊಡ್ಡ ಕನಸು ಟೀಮ್ ಇಂಡಿಯಾ ಮುಂದಿದೆ. ಅದುವೇ ಏಕದಿನ ವಿಶ್ವಕಪ್. ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವುದು ಟೀಮ್ ಇಂಡಿಯಾ ಮುಂದಿರುವ ಅತೀ ದೊಡ್ಡ ಸವಾಲು.
ಆದರೆ ಕೇವಲ 4 ತಿಂಗಳುಗಳಲ್ಲಿ ಈ ದೊಡ್ಡ ಸವಾಲಿಗೆ ಸಜ್ಜಾಗುವುದೇ ಅದಕ್ಕಿಂತ ದೊಡ್ಡ ಸವಾಲು ಎನ್ನಬಹುದು. ಏಕೆಂದರೆ ಮುಂಬರುವ ಸರಣಿಗಳ ಮೂಲಕ ಟೀಮ್ ಇಂಡಿಯಾ ಬಲಿಷ್ಠ ತಂಡ ಕಟ್ಟಬೇಕಿದೆ. ಈ ತಂಡವನ್ನು ಯಶಸ್ವಿಯಾಗಿ ರೋಹಿತ್ ಶರ್ಮಾ ಮುನ್ನಡೆಸಬೇಕಿದೆ.
ಅಂದರೆ ಏಕದಿನ ವಿಶ್ವಕಪ್ವರೆಗೂ ರೋಹಿತ್ ಶರ್ಮಾ ನಾಯಕರಾಗಿ ಮುಂದುವರೆಯಲಿದ್ದಾರೆ. ಆದರೆ ಏಕದಿನ ವಿಶ್ವಕಪ್ನಲ್ಲೂ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು ವಿಫಲವಾದರೆ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಅವರ ತಲೆದಂಡವಾಗುವುದು ಖಚಿತ.
ಹೀಗಾಗಿ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಪಾಲಿಗೆ ಏಕದಿನ ವಿಶ್ವಕಪ್ ಬಹುಮುಖ್ಯ. ಅದರಲ್ಲೂ ನಾಯಕತ್ವದೊಂದಿಗೆ ಇನ್ನೊಂದು ವರ್ಷ ಟೀಮ್ ಇಂಡಿಯಾ ಪರ ಆಡಬೇಕೆಂದರೆ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಗೆಲ್ಲಲೇಬೇಕು. ಹೀಗಾಗಿಯೇ ಮುಂಬರುವ ಏಕದಿನ ವಿಶ್ವಕಪ್ ಹಿಟ್ಮ್ಯಾನ್ ಪಾಲಿಗೆ ಕೊನೆಯ ಅವಕಾಶ ಎಂದು ವಿಶ್ಲೇಷಿಸಲಾಗುತ್ತಿದೆ.