ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಕ್ರಿಕೆಟ್ ತಂಡದ ಅಜೇಯ ಗೆಲುವಿನ ಓಟ ಮುಂದುವರೆದಿದೆ. ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲೂ 160 ರನ್ಗಳ ಅಮೋಘ ಜಯ ಕಂಡು ಈ ಬಾರಿಯ ಟೂರ್ನಿಯಲ್ಲಿ ಆಡಿದ ಒಂಬತ್ತು ಪಂದ್ಯಗಳ ಪೈಕಿ ಒಂಬತ್ತರಲ್ಲೂ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶ್ರೇಯಸ್ ಅಯ್ಯರ್-ಕೆಎಲ್ ರಾಹುಲ್ ಶತಕ ಹಾಗೂ ಗಿಲ್, ರೋಹಿತ್, ವಿರಾಟ್ ಅರ್ಧಶತಕದ ನೆರವಿನಿಂದ 410 ರನ್ ಕಲೆಹಾಕಿತು. ಡಚ್ಚರಿ 250 ರನ್ಗಳಿಗೆ ಆಲೌಟ್ ಆದರು. ಭಾರತ ಪರ ಕೊಹ್ಲಿ, ರೋಹಿತ್, ಗಿಲ್, ಸೂರ್ಯಕುಮಾರ್ ಕೂಡ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗೆಲುವಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ನಾವು ಟೂರ್ನಿಯನ್ನು ಪ್ರಾರಂಭಿಸಿದಾಗಿನಿಂದ, ಒಂದು ಸಮಯದಲ್ಲಿ ಒಂದು ಆಟದ ಬಗ್ಗೆ ಮಾತ್ರ ಯೋಚಿಸುತ್ತೇವೆ. ಆ ಆಟವನ್ನು ಚೆನ್ನಾಗಿ ಆಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ.
ಇದು ಸುದೀರ್ಘವಾದ ಪಂದ್ಯಾವಳಿಯಾಗಿರುವುದರಿಂದ ನಾವು ಮುಂದಿನ 3, 4 ಪಂದ್ಯಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಅದರ ಬದಲು ಈಗ ನಮ್ಮ ಪಂದ್ಯ ಯಾವುದು ಅದರ ಮೇಲೆ ಗಮನ ಕೇಂದ್ರೀಕರಿಸಿ ಅದನ್ನು ಚೆನ್ನಾಗಿ ಆಡುವುದು ನಮಗೆ ಮುಖ್ಯ. ನಮ್ಮ ಎಲ್ಲ ಆಟಗಾರರು ಮಾಡಿದ್ದು ಅದನ್ನೇ ಎಂದು ಹಿಟ್ಮ್ಯಾನ್ ಹೇಳಿದ್ದಾರೆ.
ನೀವು ವಿಭಿನ್ನ ಸ್ಥಳಗಳಲ್ಲಿ ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವ ಕಾರಣ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಆಡಬೇಕು, ಅದನ್ನೇ ನಾವು ಮಾಡಿದ್ದೇವೆ. ಈ ಒಂಬತ್ತು ಪಂದ್ಯಗಳಲ್ಲಿ ನಾವು ಆಡಿದ್ದನ್ನು ನೋಡಿದರೆ ತುಂಬಾ ಸಂತೋಷವಾಗುತ್ತದೆ. ಏಕೆಂದರೆ ನಮ್ಮ ಬೇರೆ ಬೇರೆ ಆಟಗಾರರು ವಿವಿಧ ಸಮಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರತಿಯೊಬ್ಬರೂ ಜವಾಬ್ದಾರಿಯನ್ನು ತೆಗೆದುಕೊಂಡು ತಂಡಕ್ಕಾಗಿ ಕೆಲಸವನ್ನು ಮಾಡಿದ್ದಾರೆ - ರೋಹಿತ್ ಶರ್ಮಾ.
ನಾವು ಈ ಪಂದ್ಯಾವಳಿಯಲ್ಲಿ ಸತತವಾಗಿ ನಾಲ್ಕು ಪಂದ್ಯಗಳನ್ನು ಚೇಸ್ ಮಾಡಿದ್ದೇವೆ. ನಂತರ ಮೊದಲು ಬ್ಯಾಟ್ ಮಾಡಬೇಕಾಯಿತು. ಬೋರ್ಡ್‌ನಲ್ಲಿ ರನ್‌ಗಳನ್ನು ಹಾಕಬೇಕಾಗಿತ್ತು. ಆಗ ಸೀಮರ್‌ಗಳು ಸ್ಪಿನ್ನರ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ಡ್ರೆಸ್ಸಿಂಗ್ ಕೋಣೆಯ ವಾತಾವರಣವನ್ನು ಉತ್ಸಾಹಭರಿತವಾಗಿರಿಸಲು ಫಲಿತಾಂಶಗಳು ಮುಖ್ಯವಾಗಿದೆ ಎಂದರು ರೋಹಿತ್ ಶರ್ಮಾ.
ನಾವು ಮೈದಾನದಲ್ಲಿ ಬಹಳಷ್ಟು ಕಾಮ್ ಆಗಿ, ಉತ್ಸಾಹದಿಂದ ಆಟವನ್ನು ಆಡುತ್ತೇವೆ. ಅದು ನಮ್ಮ ಪ್ರದರ್ಶನಗಳ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ನಾವು ಈ ರೀತಿಯ ವಿಷಯಗಳನ್ನು ಪ್ರಯತ್ನಿಸಿದಾಗ, ವಾತಾವರಣವನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಇರಿಸಬಹುದು. ಹುಡುಗರು ಯಾವುದೇ ಹೊರೆಯಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂಬದು ರೋಹಿತ್ ಮಾತು.
ಬೌಲಿಂಗ್ ಆಯ್ಕೆ ಬಗ್ಗೆ ಮಾತನಾಡಿದ ರೋಹಿತ್, ನೀವು ಐದು ಬೌಲರ್‌ಗಳನ್ನು ಹೊಂದಿರುವಾಗ, ತಂಡದೊಳಗೆ ಆ ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಇಂದು ನಾವು ಒಂಬತ್ತು (ಬೌಲಿಂಗ್) ಆಯ್ಕೆಗಳನ್ನು ಹೊಂದಿದ್ದೇವೆ. ಈ ಪಂದ್ಯದಲ್ಲಿ ನಾವು ಕೆಲವು ಹೊಸ ವಿಚಾರಗಳನ್ನು ಪ್ರಯತ್ನಿಸಿದೆವು. ಬೌಲಿಂಗ್ ಘಟಕದಲ್ಲಿ, ನಾವು ವಿಭಿನ್ನವಾದದ್ದನ್ನು ಮಾಡಿದೆವು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
Published On - 7:40 am, Mon, 13 November 23