ಐಸಿಸಿ ಇಂದು ಬಿಡುಗಡೆ ಮಾಡಿರುವ ನೂತನ ಏಕದಿನ ರ್ಯಾಂಕಿಂಗ್ನಲ್ಲಿ ಟೀಂ ಇಂಡಿಯಾ ಆಟಗಾರರ ಪಾರುಪತ್ಯ ಮುಂದುವರೆದಿದೆ. ಏಕದಿನ ವಿಶ್ವಕಪ್ ನಂತರ ಯಾವುದೇ ಏಕದಿನ ಸರಣಿ ಆಡದಿದ್ದರೂ, ಟೀಂ ಇಂಡಿಯಾ ಆಟಗಾರರು ಏಕದಿನ ಶ್ರೇಯಾಂಕದಲ್ಲಿ ಟಾಪ್ ಐದರೊಳಗೆ ಕಾಣಿಸಿಕೊಂಡಿದ್ದಾರೆ.
ನೂತನ ರ್ಯಾಂಕಿಂಗ್ನಲ್ಲಿ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಝಂ ಎಂದಿನಂತೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಪ್ರಸ್ತುತ 824 ರೇಟಿಂಗ್ ಪಾಯಿಂಟ್ ಪಡೆದಿರುವ ಬಾಬರ್, ಇನ್ನು ಸ್ವಲ್ಪ ದಿನ ಅಗ್ರಸ್ಥಾನದಲ್ಲೇ ಮುಂದುವರೆಯುವ ಸಾಧ್ಯತೆಗಳಿವೆ.
ಏಕೆಂದರೆ ಬಾಬರ್ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿರುವ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಮುಂದಿನ ಕೆಲವು ತಿಂಗಳಲ್ಲಿ ಯಾವುದೇ ಏಕದಿನ ಸರಣಿ ಆಡುವುದಿಲ್ಲ. ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಗಿಲ್, 801 ರೇಟಿಂಗ್ ಹೊಂದಿದ್ದಾರೆ.
ಗಿಲ್ ನಂತರದ ಸ್ಥಾನದಲ್ಲಿರುವ ಅಂದರೆ ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ಕೊಹ್ಲಿ ಕೂಡ ಏಕದಿನ ವಿಶ್ವಕಪ್ ನಂತರ ಯಾವುದೇ ಏಕದಿನ ಪಂದ್ಯವನ್ನಾಡಿಲ್ಲ. ಆದರೂ. 768 ರೇಟಿಂಗ್ ಪಡೆದಿರುವ ಕೊಹ್ಲಿಗೆ ಮೂರನೇ ಸ್ಥಾನ ಸಿಕ್ಕಿದೆ.
ಕಳೆದ ಶ್ರೇಯಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಒಂದು ಸ್ಥಾನ ಮೇಲೇರಿ ಇದೀಗ 5ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಬಂದಿದ್ದಾರೆ. 764 ರೇಟಿಂಗ್ ಹೊಂದಿರುವ ರೋಹಿತ್ ಕೂಡ ಯಾವುದೇ ಏಕದಿನ ಪಂದ್ಯವನ್ನಾಡಿಲ್ಲ. ಅದಾಗ್ಯೂ ಐರ್ಲೆಂಡ್ ಕ್ರಿಕೆಟರ್ ಹ್ಯಾರಿ ಟೆಕ್ಟರ್ ಅವರ ಕಳಪೆ ಆಟ ರೋಹಿತ್ಗೆ ಲಾಭ ಮಾಡಿಕೊಟ್ಟಿದೆ.
ಈ ಹಿಂದೆ ಹ್ಯಾರಿ ಟೆಕ್ಟರ್ ನಾಲ್ಕನೇ ಸ್ಥಾನದಲ್ಲಿದ್ದರು, ಆದರೆ ಈಗ ಅವರು 746 ರೇಟಿಂಗ್‌ನೊಂದಿಗೆ ರೋಹಿತ್ ಶರ್ಮಾಗೆ ಸಮನಾಗಿದ್ದಾರೆ. ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ 728 ರೇಟಿಂಗ್‌ನೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ 723 ರೇಟಿಂಗ್‌ನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ ಮೂರು ಸ್ಥಾನ ಜಿಗಿಯವುದರೊಂದಿಗೆ ಇದೀಗ ಟಾಪ್ 10ರೊಳಗೆ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲಾನ್ ಒಂದು ಸ್ಥಾನ ಕುಸಿದು ಒಂಬತ್ತನೇ ಸ್ಥಾನಕ್ಕೆ ಜಾರಿದ್ದಾರೆ. ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 701 ರೇಟಿಂಗ್‌ನೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ.
Published On - 7:11 pm, Wed, 20 March 24