Updated on:Jan 14, 2023 | 9:27 PM
ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ SA ಟಿ20 ಲೀಗ್ನ 4ನೇ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಪರ್ಲ್ ರಾಯಲ್ಸ್ ನಡುವಣ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್ ಕಿಂಗ್ಸ್ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ್ದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. 3ನೇ ಓವರ್ ವೇಳೆಗೆ ಆರಂಭಿಕರಾದ ರೀಜಾ ಹೆಂಡ್ರಿಕ್ಸ್ (4) ಹಾಗೂ ಜಾನ್ನೆಮನ್ ಮಲಾನ್ (2) ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಡುಪ್ಲೆಸಿಸ್ ಕೂಡ 2 ರನ್ಗಳಿಸಿ ಔಟಾಗಿದ್ದರು.
ಇನ್ನು ರೊಮಾರಿಯೊ ಶೆಫರ್ಡ್ 7 ರನ್ಗಳಿಸಿದರೆ, ಜಾರ್ಜ್ ಗಾರ್ಟನ್ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅತ್ತ ಕೇವಲ 36 ರನ್ಗಳಿಗೆ 7 ವಿಕೆಟ್ ಉರುಳಿಸಿ ಪರ್ಲ್ ರಾಯಲ್ಸ್ ಬೌಲರ್ಗಳು ಪಾರುಪತ್ಯ ಮೆರೆದರು.
ಇದಾಗ್ಯೂ ಕೆಳ ಕ್ರಮಾಂಕದಲ್ಲಿ ಅಲ್ಝಾರಿ ಜೋಸೆಫ್ (13) ಹಾಗೂ ವಿಲಿಯಮ್ಸ್ ಅಜೇಯ 17 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 50 ರ ಗಡಿದಾಟಿಸಿದರು. ಆದರೆ ರಾಯಲ್ಸ್ ಬೌಲರ್ಗಳ ಕರಾರುವಾಕ್ ದಾಳಿಗೆ ತತ್ತರಿಸಿದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು 17.2 ಓವರ್ಗಳಲ್ಲಿ ಕೇವಲ 81 ರನ್ಗಳಿಸಿ ಆಲೌಟ್ ಆಯಿತು.
ಇನ್ನು ಈ ಸುಲಭ ಗುರಿಯನ್ನು ಬೆನ್ನತ್ತಿದ ಡೇವಿಡ್ ಮಿಲ್ಲರ್ ನಾಯಕತ್ವದ ಪರ್ಲ್ ರಾಯಲ್ಸ್ ತಂಡವು 3 ವಿಕೆಟ್ ನಷ್ಟಕ್ಕೆ 10.3 ಓವರ್ಗಳಲ್ಲಿ ಗುರಿಮುಟ್ಟಿತು. ಈ ಮೂಲಕ ಪರ್ಲ್ ರಾಯಲ್ಸ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ ಎಂಬ ಅಪಖ್ಯಾತಿ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವದ ಜೋಬರ್ಗ್ ಸೂಪರ್ ಕಿಂಗ್ಸ್ ಪಾಲಾಗಿದೆ.
Published On - 9:25 pm, Sat, 14 January 23