- Kannada News Photo gallery Cricket photos san francisco unicorns breaks washington Freedom's Highest Total Record in MLC
MLC 2025: 16 ಸಿಕ್ಸ್, 18 ಫೋರ್… ಒಂದೇ ದಿನದಲ್ಲಿ ದಾಖಲೆ ಉಡೀಸ್
Major League Cricket 2025: ಮೇಜರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯ 14ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ತಂಡವು 20 ಓವರ್ಗಳಲ್ಲಿ 246 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡವು 20 ಓವರ್ಗಳಲ್ಲಿ 199 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.
Updated on: Jun 24, 2025 | 11:26 AM

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಡಲ್ಲಾಸ್ನಲ್ಲಿ ನಡೆದ ಈ ಟೂರ್ನಿಯ 14ನೇ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ನ್ಯೂಯಾರ್ಕ್ ತಂಡದ ನಾಯಕ ನಿಕೋಲಸ್ ಪೂರನ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಕ್ಕೆ ಆರಂಭಿಕ ದಾಂಡಿಗರಾದ ಮ್ಯಾಥ್ಯೂ ಶಾರ್ಟ್ ಹಾಗೂ ಟಿಮ್ ಸೈಫರ್ಟ್ ಭರ್ಜರಿ ಆರಂಭ ಒದಗಿಸಿದ್ದರು. ಈ ಜೋಡಿಯು ಮೊದಲ ವಿಕೆಟ್ಗೆ 86 ರನ್ ಬಾರಿಸಿದ ಬಳಿಕ ಸೈಫರ್ಟ್ (26) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಜೇಕ್ ಪ್ರೇಸರ್ ಮೆಕ್ಗುರ್ಕ್ ಕೂಡ ಶಾರ್ಟ್ಗೆ ಉತ್ತಮ ಸಾಥ್ ನೀಡಿದರು.

ಒಂದೆಡೆ ಮ್ಯಾಥ್ಯೂ ಶಾರ್ಟ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ಮೆಕ್ಗುರ್ಕ್ ಎಂಐ ನ್ಯೂಯಾರ್ಕ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಶಾರ್ಟ್ ಬ್ಯಾಟ್ನಿಂದ 43 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 91 ರನ್ ಮೂಡಿಬಂತು. ಇನ್ನು ಜೇಕ್ ಪ್ರೇಸರ್ ಮೆಕ್ಗುರ್ಕ್ 26 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 64 ರನ್ ಚಚ್ಚಿದರು.

ಈ ಮೂಲಕ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು 20 ಓವರ್ಗಳಲ್ಲಿ 16 ಸಿಕ್ಸ್ ಹಾಗೂ 18 ಫೋರ್ಗಳೊಂದಿಗೆ 246 ರನ್ ಕಲೆಹಾಕಿತು. ಇದು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್ ಎಂಬುದು ವಿಶೇಷ. ಇದಕ್ಕೂ ಮುನ್ನ ಎಂಎಲ್ಸಿ ಲೀಗ್ನಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ದಾಖಲೆ ವಾಷಿಂಗ್ಟನ್ ಫ್ರೀಡಂ ತಂಡದ ಹೆಸರಿನಲ್ಲಿತ್ತು.

ಜೂನ್ 23, 2025 ರಂದು ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 223 ರನ್ಗಳನ್ನು ಚೇಸ್ ಮಾಡುವ ಮೂಲಕ ವಾಷಿಂಗ್ಟನ್ ಫ್ರೀಡಂ ತಂಡವು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ದಾಖಲೆ ಬರೆದಿತ್ತು. ಆದರೆ ಈ ದಾಖಲೆಯನ್ನು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು ಒಂದೇ ದಿನದಲ್ಲಿ ಅಳಿಸಿ ಹಾಕಿದೆ.

ಎಂಐ ನ್ಯೂಯಾರ್ಕ್ ವಿರುದ್ಧ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 246 ರನ್ ಗಳಿಸಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಎಂಎಲ್ಸಿ ಲೀಗ್ನಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ದಾಖಲೆ ಬರೆದಿದೆ. ಇನ್ನು ಈ ದಾಖಲೆಯ ಮೊತ್ತವನ್ನು ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡವು 20 ಓವರ್ಗಳಲ್ಲಿ 199 ರನ್ಗಳಿಸಿ 47 ರನ್ಗಳಿಂದ ಸೋಲೊಪ್ಪಿಕೊಂಡಿತು.









