- Kannada News Photo gallery Cricket photos Who hit the most sixes in Tests for India: Rishabh Pant in List
Rishabh Pant: ‘ಪಂತ್’ಸ್ಟಿಕ್ ಬ್ಯಾಟಿಂಗ್ಗೆ ಸೆಹ್ವಾಗ್ ದಾಖಲೆಯೇ ಶೇಕಿಂಗ್..!
Rishabh Pant Records: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 9 ಸಿಕ್ಸ್ ಸಿಡಿಸುವ ಮೂಲಕ ಟೀಮ್ ಇಂಡಿಯಾದ ಎಡಗೈ ದಾಂಡಿಗ ರಿಷಭ್ ಪಂತ್, ಬೆನ್ ಸ್ಟೋಕ್ಸ್ ಹಾಗೂ ಆಂಡ್ರ್ಯೂ ಫ್ಲಿಂಟಾಫ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಇಬ್ಬರು ದಾಂಡಿಗರು ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ತಲಾ 9 ಸಿಕ್ಸ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಸರಿಗಟ್ಟಿರುವ ರಿಷಭ್ ಶೀಘ್ರದಲ್ಲೇ ಟೀಮ್ ಇಂಡಿಯಾದ ಸಿಕ್ಸರ್ ಕಿಂಗ್ ಎನಿಸಿಕೊಳ್ಳಲಿದ್ದಾರೆ.
Updated on: Jun 24, 2025 | 2:53 PM

ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ಸಿಕ್ಸರ್ಗಳ ಸುರಿಮಳೆಗೈದಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 6 ಭರ್ಜರಿ ಸಿಕ್ಸರ್ಗಳೊಂದಿಗೆ 134 ರನ್ ಬಾರಿಸಿದ್ದ ರಿಷಭ್, ದ್ವಿತೀಯ ಇನಿಂಗ್ಸ್ನಲ್ಲಿ 3 ಸಿಕ್ಸ್ಗಳೊಂದಿಗೆ 118 ರನ್ ಕಲೆಹಾಕಿದ್ದಾರೆ.

ಈ 9 ಸಿಕ್ಸರ್ಗಳೊಂದಿಗೆ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಅದು ಕೂಡ ಕೇವಲ 44 ಪಂದ್ಯಗಳ ಮೂಲಕ ಎಂಬುದು ವಿಶೇಷ. ಇನ್ನು ರಿಷಭ್ ಪಂತ್ ಮುಂದಿರುವ ಟಾರ್ಗೆಟ್ಗಳು ರೋಹಿತ್ ಶರ್ಮಾ ಹಾಗೂ ವೀರೇಂದ್ರ ಸೆಹ್ವಾಗ್.

ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಪರ 178 ಟೆಸ್ಟ್ ಇನಿಂಗ್ಸ್ ಆಡಿರುವ ಸೆಹ್ವಾಗ್ 10346 ಎಸೆತಗಳಲ್ಲಿ 90 ಸಿಕ್ಸ್ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ರೋಹಿತ್ ಶರ್ಮಾ. ಹಿಟ್ಮ್ಯಾನ್ ಭಾರತದ ಪರ 116 ಟೆಸ್ಟ್ ಇನಿಂಗ್ಸ್ಗಳನ್ನು ಆಡಿದ್ದಾರೆ. ಈ ವೇಳೆ 7538 ಎಸೆತಗಳನ್ನು ಎದುರಿಸಿರುವ ಅವರು ಬರೋಬ್ಬರಿ 88 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಹಾಗೆಯೇ ಮಹೇಂದ್ರ ಸಿಂಗ್ 144 ಟೆಸ್ಟ್ ಇನಿಂಗ್ಸ್ಗಳಿಂದ ಒಟ್ಟು 78 ಸಿಕ್ಸ್ ಬಾರಿಸಿದ್ದಾರೆ.

ಇದೀಗ ಧೋನಿಯನ್ನು ಹಿಂದಿಕ್ಕಿರುವ ರಿಷಭ್ ಪಂತ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಪಂಟರ್ ಪಂತ್ ಈವರೆಗೆ 77 ಟೆಸ್ಟ್ ಇನಿಂಗ್ಸ್ ಆಡಿದ್ದು, ಈ ವೇಳೆ ಎದುರಿಸಿದ 4322 ಎಸೆತಗಳಲ್ಲಿ ಬರೋಬ್ಬರಿ 82 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಅಂದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರಿಷಭ್ ಪಂತ್ ಇನ್ನು 9 ಸಿಕ್ಸ್ ಬಾರಿಸಿದರೆ, ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಈ ಬಾರಿಯ ಸರಣಿಯಲ್ಲಿ ಪಂತ್ ಕಡೆಯಿಂದ ಭರ್ಜರಿ ದಾಖಲೆಯನ್ನು ನಿರೀಕ್ಷಿಸಬಹುದು.
