
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ಮತ್ಯಾರೂ ಅಲ್ಲ, ವೆಸ್ಟ್ ಇಂಡೀಸ್ ವೇಗಿ ಶಮರ್ ಜೋಸೆಫ್ (Shamar Joseph). ಅದು ಕೂಡ ಕ್ಯಾಚ್ ಹಿಡಿದು, ವಿಕೆಟ್ ಪಡೆಯುವ ಮೂಲಕ ಎಂಬುದು ವಿಶೇಷ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ 37ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಟಲಿ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಇಟಲಿ ತಂಡಕ್ಕೆ ಶಮರ್ ಜೋಸೆಫ್ ಮಾರಕವಾಗಿ ಪರಿಣಮಿಸಿದರು. ತಮ್ಮ ಘಾತಕ ವೇಗದೊಂದಿಗೆ ಇಟಲಿ ಬ್ಯಾಟರ್ಗಳನ್ನು ಕಂಗೆಡಿಸಿದ ಶಮರ್ 4 ಓವರ್ಗಳಲ್ಲಿ 30 ರನ್ ನೀಡಿ 4 ವಿಕೆಟ್ಗಳನ್ನು ಕಬಳಿಸಿದರು. ಈ ಮೂಲಕ ಇಟಲಿ ತಂಡ 18 ಓವರ್ಗಳಲ್ಲಿ 123 ರನ್ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

ವಿಶೇಷ ಎಂದರೆ ಇದೇ ಪಂದ್ಯದಲ್ಲಿ ಶಮರ್ ಜೋಸೆಫ್ 4 ಕ್ಯಾಚ್ಗಳನ್ನು ಸಹ ಹಿಡಿದಿದ್ದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮ್ಯಾಚ್ನಲ್ಲಿ 4 ವಿಕೆಟ್ ಪಡೆದು, 4 ಕ್ಯಾಚ್ ಹಿಡಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಅಂದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಾವುದೇ ಆಟಗಾರ 4 ವಿಕೆಟ್ ಪಡೆದು, 4 ಕ್ಯಾಚ್ಗಳ ಹಿಡಿದ ನಿದರ್ಶನ ಇರಲಿಲ್ಲ. ಇದೀಗ ಟಿ20 ವಿಶ್ವಕಪ್ ಪಂದ್ಯದ ಮೂಲಕ ವೆಸ್ಟ್ ಇಂಡೀಸ್ ವೇಗಿ ಶಮರ್ ಜೋಸೆಫ್ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.