Shamar Joseph: ಬರೋಬ್ಬರಿ 7 ವಿಕೆಟ್: ಹೊಸ ಇತಿಹಾಸ ರಚಿಸಿದ ಶಮರ್
Australia vs West Indies: ಬ್ರಿಸ್ಬೇನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿರುವ ಶಮರ್ ಜೋಸೆಫ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
Updated on: Jan 28, 2024 | 2:30 PM

ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಗರ್ವಭಂಗವಾಗಿದೆ. ರಣರೋಚಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡ 8 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ 27 ವರ್ಷಗಳ ಬಳಿಕ ವಿಂಡೀಸ್ ಪಡೆ ಆಸೀಸ್ ನೆಲದಲ್ಲಿ ಟೆಸ್ಟ್ ಪಂದ್ಯವೊಂದನ್ನು ಗೆದ್ದುಕೊಂಡಿದೆ.

ಈ ಐತಿಹಾಸಿಕ ಗೆಲುವಿನ ರೂವಾರಿ ವಿಂಡೀಸ್ ವೇಗಿ ಶಮರ್ ಜೋಸೆಫ್. 24 ವರ್ಷದ ಯುವ ವೇಗದ ಬೌಲರ್ಗೆ ಇದು ಚೊಚ್ಚಲ ಟೆಸ್ಟ್ ಸರಣಿ. ಮೊದಲ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದ ಶಮರ್ ದ್ವಿತೀಯ ಟೆಸ್ಟ್ನಲ್ಲೂ ಕಮಾಲ್ ಮಾಡಿದ್ದಾರೆ. ಅದು ಅಂತಿಂಥ ಕಮಾಲ್ ಅಲ್ಲ ಎಂಬುದಷ್ಟೇ ವ್ಯತ್ಯಾಸ.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶಮರ್ ಜೋಸೆಫ್ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಆದರೆ ದ್ವಿತೀಯ ಇನಿಂಗ್ಸ್ 216 ರನ್ಗಳ ಸುಲಭ ಗುರಿ ಪಡೆದಿದ್ದ ಆಸ್ಟ್ರೇಲಿಯಾಗೆ ಯುವ ವೇಗಿ ಮಾರಕವಾಗಿ ಪರಿಣಮಿಸಿದರು. ಅನಿರೀಕ್ಷಿತ ಬೌನ್ಸರ್ಗಳ ಮೂಲಕ ಆಸ್ಟ್ರೇಲಿಯನ್ನರನ್ನು ಕಾಡಿದ ಶಮರ್ ಪಂದ್ಯದ ಗತಿಯನ್ನೇ ಬದಲಿಸುವ ಸೂಚನೆ ನೀಡಿದ್ದರು.

ಅದರಂತೆ ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹ್ಯಾಝಲ್ವುಡ್ಗೆ ಪೆವಿಯನ್ ಹಾದಿ ತೋರಿಸಿದರು. ಅಲ್ಲದೆ ಕೇವಲ 11.5 ಓವರ್ಗಳಲ್ಲಿ 68 ರನ್ ನೀಡಿ 7 ವಿಕೆಟ್ ಕಬಳಿಸಿ ವೆಸ್ಟ್ ಇಂಡೀಸ್ ತಂಡಕ್ಕೆ 8 ರನ್ಗಳ ರೋಚಕ ಜಯ ತಂದುಕೊಟ್ಟರು. ಈ ಐತಿಹಾಸಿಕ ಗೆಲುವಿನೊಂದಿಗೆ ಶಮರ್ ಜೋಸೆಫ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ..

ಆಸ್ಟ್ರೇಲಿಯಾದಲ್ಲಿ ಆಡಿದ ಚೊಚ್ಚಲ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ 5 ಅಥವಾ 5+ ವಿಕೆಟ್ಗಳನ್ನು ಕಬಳಿಸಿದ ಮೊದಲ ವಿಂಡೀಸ್ ವೇಗಿ ಎಂಬ ದಾಖಲೆ ಶಮರ್ ಜೋಸೆಫ್ ಪಾಲಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಶಮರ್ 94 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಇದೀಗ 68 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ ಈ ವಿಶೇಷ ದಾಖಲೆ ಬರೆದಿದ್ದಾರೆ.

ಹಾಗೆಯೇ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 7 ವಿಕೆಟ್ ಪಡೆದ ವೆಸ್ಟ್ ಇಂಡೀಸ್ನ 4ನೇ ಬೌಲರ್ ಎಂಬ ಹೆಗ್ಗಳಿಕೆಗೆ ಶಮರ್ ಜೋಸೆಫ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಕರ್ಟ್ಲಿ ಆಂಬ್ರೋಸ್ (7/25, 1993), ಆಂಡಿ ರಾಬರ್ಟ್ಸ್ (7/54, 1975), ಮತ್ತು ಗೆರ್ರಿ ಗೊಮೆಜ್ (7/55, 1952) ಈ ಸಾಧನೆ ಮಾಡಿದ್ದರು. ಇದೀಗ ಈ ವಿಶೇಷ ಸಾಧಕರ ಪಟ್ಟಿಗೆ ಶಮರ್ (7/68, 2024) ಕೂಡ ಸೇರ್ಪಡೆಯಾಗಿದ್ದಾರೆ.

ಇನ್ನು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೂಲಕ ಶಮರ್ ಜೋಸೆಫ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಎಸೆದ ಮೊದಲ ಎಸೆತದಲ್ಲೇ ಸ್ಟೀವ್ ಸ್ಮಿತ್ ವಿಕೆಟ್ ಪಡೆದಿದ್ದರು. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲಿ ಮೊದಲ ವಿಕೆಟ್ ಪಡೆದ ಎರಡನೇ ವೆಸ್ಟ್ ಇಂಡೀಸ್ ಬೌಲರ್ ಎನಿಸಿಕೊಂಡಿದ್ದರು.

ಇದೀಗ ಕರಾರುವಾಕ್ ದಾಳಿ ಮೂಲಕ 7 ವಿಕೆಟ್ ಉರುಳಿಸಿ ಶಮರ್ ಜೋಸೆಫ್ ವೆಸ್ಟ್ ಇಂಡೀಸ್ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ 24ರ ಹರೆಯದ ಯುವ ವೇಗಿ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿರುವುದು ವಿಶೇಷ.




