Updated on: Jan 06, 2024 | 8:56 AM
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಟಿಟಾಸ್ ಸಾಧು ಅವರ ಮಾರಕ ದಾಳಿಗೆ ತತ್ತರಿಸಿತು. ಪರಿಣಾಮ 19.2 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡ 141 ರನ್ಗಳಿಸಿ ಆಲೌಟ್ ಆಗಿದೆ. ಭಾರತದ ಪರ ಟಿಟಾಸ್ ಸಾಧು 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು 142 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿದರು. 52 ಎಸೆತಗಳನ್ನು ಎದುರಿಸಿದ ಸ್ಮೃತಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಈ ಅರ್ಧಶತಕದೊಂದಿಗೆ ಸ್ಮೃತಿ ಮಂಧಾನ ಟಿ20 ಕ್ರಿಕೆಟ್ನಲ್ಲಿ 3000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಭಾರತದ 2ನೇ ಆಟಗಾರ್ತಿ ಹಾಗೂ ವಿಶ್ವದ 6ನೇ ಮಹಿಳಾ ಬ್ಯಾಟರ್ ಎಂಬ ಹೆಗ್ಗಳಿಕೆ ಸ್ಮೃತಿ ಪಾತ್ರರಾದರು.
ಇದಕ್ಕೂ ಮುನ್ನ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಹರ್ಮನ್ಪ್ರೀತ್ ಕೌರ್ (3195) 3 ಸಾವಿರ ರನ್ ಪೂರೈಸಿದ್ದರು. ಇದೀಗ ಈ ವಿಶೇಷ ಸಾಧಕರ ಪಟ್ಟಿಗೆ ಸ್ಮೃತಿ ಮಂಧಾನ (3052) ಕೂಡ ಸೇರ್ಪಡೆಯಾಗಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಸ್ಮೃತಿ ಮಂಧಾನ (54) ಹಾಗೂ ಶಫಾಲಿ ವರ್ಮಾ (64) ಬಾರಿಸಿದ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 17.4 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್ಗಳಿಂದ ಬಗ್ಗು ಬಡಿದು ಶುಭಾರಂಭ ಮಾಡಿದೆ.