Steve Smith: ಭರ್ಜರಿ ದಾಖಲೆ ಬರೆದ ಸ್ಟೀವ್ ಸ್ಮಿತ್
Steve Smith Record: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ವಿಶೇಷ ದಾಖಲೆ ಬರೆದಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ 7ನೇ ಆಸ್ಟ್ರೇಲಿಯನ್ ಎನಿಸಿಕೊಂಡಿದ್ದಾರೆ.
Updated on: Jan 28, 2024 | 8:10 AM

ಬ್ರಿಸ್ಬೇನ್ನ ದಿ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಸ್ಟೀವ್ ಸ್ಮಿತ್ (Steve Smith) ಭರ್ಜರಿ ದಾಖಲೆಯೊಂದನ್ನು ಬರೆದಿದ್ದಾರೆ. ಈ ಪಂದ್ಯದ 2ನೇ ಇನಿಂಗ್ಸ್ನಲ್ಲಿ 33* ರನ್ ಬಾರಿಸುವುದರೊಂದಿಗೆ ಸ್ಮಿತ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 16 ಸಾವಿರ ರನ್ ಪೂರೈಸಿದರು.

ಈ ಮೂಲಕ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 16000 ರನ್ ಕಲೆಹಾಕಿದ ವಿಶ್ವದ 33ನೇ ಆಟಗಾರ ಎನಿಸಿಕೊಂಡರು. ಹಾಗೆಯೇ ಅತೀ ವೇಗವಾಗಿ 16 ಸಾವಿರ ರನ್ ಕಲೆಹಾಕಿದ ಆಸ್ಟ್ರೇಲಿಯನ್ ಬ್ಯಾಟರ್ ಎಂಬ ದಾಖಲೆಯನ್ನು ಸ್ಟೀವ್ ಸ್ಮಿತ್ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. ಪಂಟರ್ ಖ್ಯಾತಿಯ ಪಾಂಟಿಂಗ್ 386 ಇನಿಂಗ್ಸ್ಗಳ ಮೂಲಕ 16 ಸಾವಿರ ರನ್ ಪೂರೈಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಹಿಂದಿಕ್ಕಿ ಸ್ಟೀವ್ ಸ್ಮಿತ್ ಅಗ್ರಸ್ಥಾನಕ್ಕೇರಿದ್ದಾರೆ.

ಇದೀಗ 381 ಇನಿಂಗ್ಸ್ಗಳ ಮೂಲಕ 16 ಸಾವಿರ ರನ್ ಪೂರೈಸಿರುವ ಸ್ಟೀವ್ ಸ್ಮಿತ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಪರ ಅತೀ ವೇಗವಾಗಿ 16000 ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಆಸೀಸ್ನ 7ನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳ ಮೂಲಕ 16 ಸಾವಿರ ರನ್ ಪೂರೈಸಿದ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಕೇವಲ 350 ಇನಿಂಗ್ಸ್ಗಳ ಮೂಲಕ 16000 ರನ್ ಕಲೆಹಾಕಿ ಈ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಗೆಲುವಿನತ್ತ ಆಸ್ಟ್ರೇಲಿಯಾ: ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 311 ರನ್ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡ 9 ವಿಕೆಟ್ ನಷ್ಟಕ್ಕೆ 289 ಡಿಕ್ಲೇರ್ ಘೋಷಿಸಿತು. ದ್ವಿತೀಯ ಇನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡ 193 ರನ್ಗಳಿಗೆ ಸರ್ವಪತನ ಕಂಡಿದೆ. ಇತ್ತ ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದ್ದು, ಗೆಲ್ಲಲು ಇನ್ನು ಕೇವಲ 156 ರನ್ಗಳ ಅವಶ್ಯಕತೆಯಿದೆ.
