
2026 ರ ಟಿ20 ವಿಶ್ವಕಪ್ ಆರಂಭವಾಗುವುದಕ್ಕೂ ಮೊದಲೇ ಪ್ರಮುಖ ಆಟಗಾರರ ಗಾಯ ತಂಡಗಳ ತಲೆನೋವು ಹೆಚ್ಚಿಸಿದೆ. ಟೀಂ ಇಂಡಿಯಾ, ಆಸ್ಟ್ರೇಲಿಯಾ ಸೇರಿದಂತೆ ಪ್ರಮುಖ ತಂಡಗಳ ಸ್ಟಾರ್ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದ ಅವರು ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಏಕಾಂಗಿಯಾಗಿ ಪಂದ್ಯದ ದಿಕ್ಕನೇ ಬದಲಿಸುತ್ತಿದ್ದ ಆಟಗಾರರ ಅಲಭ್ಯತೆ ತಂಡಗಳಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ.

ಟಿ20 ವಿಶ್ವಕಪ್‌ಗೆ ಒಂದು ದಿನ ಮುಂಚಿತವಾಗಿ ಟೀಂ ಇಂಡಿಯಾದ ಯುವ ವೇಗಿ ಹರ್ಷಿತ್ ರಾಣಾ ಗಾಯದಿಂದಾಗಿ ಇಡೀ ಟೂರ್ನಿಯಿಂದ ಹೊರಬಿದಿದ್ದಾರೆ ಎಂದು ವರದಿಯಾಗಿದೆ. ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಆದಾಗ್ಯೂ ಈ ಬಗ್ಗೆ ಬಿಸಿಸಿಐನಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಆಸ್ಟ್ರೇಲಿಯಾ ತಂಡಕ್ಕೂ ಆಟಗಾರರ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿದೆ. ತಂಡದ ಇಬ್ಬರು ಪ್ರಮುಖ ಬೌಲರ್‌ಗಳಾದ ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ಬೆನ್ನುನೋವಿನಿಂದಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಹ್ಯಾಜಲ್‌ವುಡ್ ಬದಲಿಗೆ ಸೀನ್ ಅಬಾಟ್ ಆಡುತ್ತಿದ್ದರೆ, ಪ್ಯಾಟ್ ಕಮ್ಮಿನ್ಸ್ ಬದಲಿಗೆ ಬೆನ್ ದ್ವಾರಶಿಯಸ್ ಆಡಲಿದ್ದಾರೆ.

ದಕ್ಷಿಣ ಆಫ್ರಿಕಾ ಕೂಡ ಗಾಯಗಳಿಂದಾಗಿ ಇಬ್ಬರು ಪ್ರಮುಖ ಆಟಗಾರರನ್ನು ಕಳೆದುಕೊಂಡಿದೆ. ಭಾರತ ಪ್ರವಾಸದ ಸಮಯದಲ್ಲಿ ಎಡಗೈ ಬ್ಯಾಟ್ಸ್‌ಮನ್ ಟೋನಿ ಡಿ ಜೋರ್ಜಿ ಗಾಯಕ್ಕೆ ತುತ್ತಾದರು. ಹೀಗಾಗಿ ಅವರು ಟಿ20 ವಿಶ್ವಕಪ್‌ಗೆ ಫಿಟ್ ಆಗಿಲ್ಲ. ಇನ್ನು SA20 ಲೀಗ್ ಸಮಯದಲ್ಲಿ ಡೊನೊವನ್ ಫೆರೇರಾ ಕೂಡ ಗಾಯಗೊಂಡಿದ್ದು ಅವರು ಕೂಡ ಚೇತರಿಸಿಕೊಂಡಿಲ್ಲ.

ನ್ಯೂಜಿಲೆಂಡ್ ಕೂಡ ಗಾಯದಿಂದಾಗಿ ಪ್ರಮುಖ ವೇಗದ ಬೌಲರ್ ಆಡಮ್ ಮಿಲ್ನೆ ಅವರನ್ನು ಕಳೆದುಕೊಂಡಿದೆ. ಎಡಗೈ ಮಂಡಿರಜ್ಜು ಗಾಯದಿಂದಾಗಿ ಬಳಲುತ್ತಿರುವ ಮಿಲ್ನೆ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಯಾಗಿ ಕೈಲ್ ಜೇಮಿಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಅಫ್ಘಾನಿಸ್ತಾನ ತಂಡ ಕೂಡ ಗಾಯದಿಂದಾಗಿ ಪ್ರಮುಖ ಆಟಗಾರರನ್ನು ಟಿ20 ವಿಶ್ವಕಪ್‌ನಿಂದ ಹೊರಗಿಟ್ಟಿದೆ. ತಂಡದ ಪ್ರಮುಖ ವೇಗದ ಬೌಲರ್ ನವೀನ್ ಉಲ್ ಹಕ್ ಗಾಯಗೊಂಡಿದ್ದು, ಅವರನ್ನು ಟಿ20 ವಿಶ್ವಕಪ್‌ನಿಂದ ಹೊರಗಿಡಲಾಗಿದೆ.