
2026 ರ ಟಿ20 ವಿಶ್ವಕಪ್ ಇನ್ನೇರಡು ದಿನಗಳಲ್ಲಿ ಆರಂಭವಾಗಲಿದೆ. 2007 ರಿಂದ ಆರಂಭವಾದ ಈ ಟೂರ್ನಿ ಇದುವರೆಗೆ 9 ಆವೃತ್ತಿಗಳನ್ನು ಕಂಡಿದ್ದು, 10ನೇ ಆವೃತ್ತಿಗೆ ಸಜ್ಜಾಗಿದೆ. ಮೊದಲ ಆವೃತ್ತಿಯಿಂದ ಇಲ್ಲಿಯವರೆಗೆ ಕೆಲವು ಅಚ್ಚರಿಯ ಸಂಗತಿಗಳು ನಡೆದಿವೆ. ಹಾಗೆಯೇ ಈ 9 ಆವೃತ್ತಿಗಳಲ್ಲಿ ನಿಮಗೆ ತಿಳಿದುಕೊಳ್ಳಲೇಬೇಕಾದ ಕೆಲವು ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಹೆಚ್ಚು ಬಾರಿ ಚಾಂಪಿಯನ್ ಆದ ತಂಡಗಳು; ಟಿ20 ವಿಶ್ವಕಪ್ನಲ್ಲಿ ಮೂರು ತಂಡಗಳು ಮಾತ್ರ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಆ ಮೂರು ತಂಡಗಳಲ್ಲಿ ಭಾರತ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಸೇರಿವೆ. 2007ಮತ್ತು 2024 ರ ಭಾರತ ಪ್ರಶಸ್ತಿ ಎತ್ತಿ ಹಿಡಿದರೆ, 2012 ಮತ್ತು 2016 ರಲ್ಲಿ ವಿಂಡೀಸ್ ಚಾಂಪಿಯನ್ ಆಗಿತ್ತು. ಮತ್ತೊಂದೆಡೆ, ಇಂಗ್ಲೆಂಡ್ 2010 ಮತ್ತು 2022 ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು.

ಅಧಿಕ ಬಾರಿ ಫೈನಲ್ ಆಡಿದ ತಂಡಗಳು; ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ತಲಾ ಮೂರು ಬಾರಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕಾಣಿಸಿಕೊಂಡಿವೆ. ಇದರಲ್ಲಿ ಭಾರತ ಹಾಗೂ ಇಂಗ್ಲೆಂಡ್ 2 ಬಾರಿ ಚಾಂಪಿಯನ್ ಆಗಿದ್ದರೆ, ಪಾಕಿಸ್ತಾನ ಮತ್ತು ಶ್ರೀಲಂಕಾ ಒಂದು ಬಾರಿ ಟ್ರೋಫಿ ಎತ್ತಿವೆ.

ಇನ್ನಿಂಗ್ಸ್ನಲ್ಲಿ ಅತ್ಯಧಿಕ ಮತ್ತು ಕಡಿಮೆ ಮೊತ್ತ; 2007 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಕೀನ್ಯಾ ವಿರುದ್ಧ 260/6 ರನ್ ಗಳಿಸುವ ಮೂಲಕ ಶ್ರೀಲಂಕಾ ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ದಾಖಲೆಯನ್ನು ಹೊಂದಿದೆ. ಇತ್ತ2014 ರಲ್ಲಿ ಶ್ರೀಲಂಕಾ ವಿರುದ್ಧ 39 ರನ್‌ಗಳಿಗೆ ಆಲೌಟ್ ಆಗಿದ್ದ ನೆದರ್‌ಲ್ಯಾಂಡ್ಸ್ ಇದುವರೆಗಿನ ಅತ್ಯಂತ ಕಡಿಮೆ ಮೊತ್ತದ ಅನಗತ್ಯ ದಾಖಲೆಯನ್ನು ಹೊಂದಿದೆ. 2024 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಉಗಾಂಡಾ ಕೂಡ ಇದೇ ಸ್ಕೋರ್‌ಗೆ ಆಲೌಟ್ ಆಗಿತ್ತು.

ಒಂದು ಆವೃತ್ತಿಯಲ್ಲಿ ಹೆಚ್ಚು ರನ್: ವಿರಾಟ್ ಕೊಹ್ಲಿ ಟೂರ್ನಿಯ ಇತಿಹಾಸದಲ್ಲಿ ಒಟ್ಟಾರೆ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದು, 35 ಪಂದ್ಯಗಳಲ್ಲಿ 1,292 ರನ್ ಬಾರಿಸಿದ್ದಾರೆ. 2014 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯಲ್ಲಿ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ 319 ರನ್ ಬಾರಿಸಿದ ಕೊಹ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಇದಲ್ಲದೆ, ಅವರು ಟೂರ್ನಮೆಂಟ್ ಇತಿಹಾಸದಲ್ಲಿ ಅತಿ ಹೆಚ್ಚು 50+ ಸ್ಕೋರ್ (15) ದಾಖಲಿಸಿದ ಸಾಧನೆಯನ್ನು ಮಾಡಿದ್ದಾರೆ.

ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್; ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ 2012 ರಲ್ಲಿ ಬಾಂಗ್ಲಾದೇಶ ವಿರುದ್ಧ ಕೇವಲ 58 ಎಸೆತಗಳಲ್ಲಿ 123 ರನ್ ಬಾರಿಸಿ ಇನ್ನಿಂಗ್ಸ್ವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.

ಅತ್ಯಧಿಕ ಶತಕಗಳು ಮತ್ತು ವೇಗದ ಅರ್ಧಶತಕ: 2 ಶತಕಗಳನ್ನು ಬಾರಿಸಿರುವ ಕ್ರಿಸ್ ಗೇಲ್ ಅತ್ಯಧಿಕ ಶತಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 2007 ರಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಯುವರಾಜ್ ಸಿಂಗ್ ಇಲ್ಲಿಯವರೆಗಿನ ವೇಗದ ಅರ್ಧಶತಕದ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಅತ್ಯಧಿಕ ಹ್ಯಾಟ್ರಿಕ್: ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಟೂರ್ನಮೆಂಟ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಹ್ಯಾಟ್ರಿಕ್ ಪಡೆದ ಏಕೈಕ ಆಟಗಾರನಾಗಿದ್ದು, ಅವರು 2024 ರ ಆವೃತ್ತಿಯಲ್ಲಿ ಎರಡೂ ಬಾರಿ ಈ ಸಾಧನೆ ಮಾಡಿದ್ದರು.