- Kannada News Photo gallery Cricket photos Team India players with the highest Test average runs in the last 12 months
Team India: ರಾಹುಲ್ಗಿಂತ ಶಮಿ ಬೆಸ್ಟ್, ಕೊಹ್ಲಿಗಿಂತ ಅಕ್ಷರ್ ಉತ್ತಮ: ಇಲ್ಲಿದೆ ಟೆಸ್ಟ್ ರನ್ ಸರಾಸರಿ ಪಟ್ಟಿ
Team India: ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸಂಪೂರ್ಣ ವಿಫಲರಾಗಿರುವ ಕೆಲ ಆಟಗಾರರಿಗೆ ಮೂರನೇ ಟೆಸ್ಟ್ನಲ್ಲಿ ಕೊನೆಯ ಚಾನ್ಸ್ ನೀಡಬಹುದು. ಇದರಲ್ಲೂ ವಿಫಲರಾದರೆ ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚು.
Updated on:Feb 26, 2023 | 2:47 PM

India vs Australia Test: ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು ಭರದಿಂದ ಸಾಗುತ್ತಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. 4 ಪಂದ್ಯಗಳ ಸರಣಿಯ ಮೂರನೇ ಪಂದ್ಯವು ಮಾರ್ಚ್ 1 ರಿಂದ ಶುರುವಾಗಲಿದೆ. ವಿಶೇಷ ಎಂದರೆ ಈ ಸರಣಿಯ ಕೊನೆಯ ಎರಡು ಪಂದ್ಯಗಳ ಮೂಲಕ ಕೆಲ ಆಟಗಾರರ ಭವಿಷ್ಯ ಕೂಡ ನಿರ್ಧಾರವಾಗಲಿದೆ.

ಏಕೆಂದರೆ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸಂಪೂರ್ಣ ವಿಫಲರಾಗಿರುವ ಕೆಲ ಆಟಗಾರರಿಗೆ ಮೂರನೇ ಟೆಸ್ಟ್ನಲ್ಲಿ ಕೊನೆಯ ಚಾನ್ಸ್ ನೀಡಬಹುದು. ಇದರಲ್ಲೂ ವಿಫಲರಾದರೆ ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚು. ಅದರಲ್ಲೂ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ.

ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯವು ಕಳೆದ ಒಂದು ವರ್ಷದಿಂದ ಮುಂದುವರೆದಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು. ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ ಅತಿ ಹೆಚ್ಚು ಸರಾಸರಿ ಹೊಂದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ರವೀಂದ್ರ ಜಡೇಜಾ: ವಿಶ್ವದ ನಂಬರ್ ಒನ್ ಟೆಸ್ಟ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ರವೀಂದ್ರ ಜಡೇಜಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜಡ್ಡು ಕಳೆದ ವರ್ಷದಲ್ಲಿ ಟೆಸ್ಟ್ ಮಾದರಿಯಲ್ಲಿ 70.7 ಸರಾಸರಿ ಹೊಂದಿದ್ದಾರೆ. ಅಂದರೆ ಒಟ್ಟಾರೆ ರನ್ಗಳಿಕೆಯನ್ನು ಪ್ರತಿ ಪಂದ್ಯದ ಸರಾಸರಿಯಲ್ಲಿ ವಿಭಜಿಸಿದರೆ ಜಡೇಜಾ 70 ರ ಸರಾಸರಿಯಲ್ಲಿ ರನ್ಗಳಿಸಿದ್ದಾರೆ.

ರಿಷಭ್ ಪಂತ್: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಪ್ರಸ್ತುತ ತಂಡದಲ್ಲಿಲ್ಲ. ಇದಾಗ್ಯೂ ಕಳೆದ ಒಂದು ವರ್ಷದಲ್ಲಿ ಅವರು 67 ರ ಸರಾಸರಿಯಲ್ಲಿ ರನ್ ಪೇರಿಸಿರುವುದು ವಿಶೇಷ.

ಶ್ರೇಯಸ್ ಅಯ್ಯರ್: ಆಸ್ಟ್ರೇಲಿಯಾ ಸರಣಿಯ ಎರಡನೇ ಪಂದ್ಯದಲ್ಲಿ ಗಾಯದಿಂದ ವಾಪಸಾದ ಶ್ರೇಯಸ್ ಅಯ್ಯರ್ ಕೂಡ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದರಂತೆ ಕಳೆದ ವರ್ಷದಲ್ಲಿ ಅಯ್ಯರ್ 48.7 ಸರಾಸರಿಯಲ್ಲಿ ಸ್ಕೋರ್ ಮಾಡಿದ್ದಾರೆ.

ಚೇತೇಶ್ವರ್ ಪೂಜಾರ: ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಚೇತೇಶ್ವರ ಪೂಜಾರ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷದಲ್ಲಿ ಅವರು 48.2 ರನ್ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ.

ರವಿಚಂದ್ರನ್ ಅಶ್ವಿನ್: ಪ್ರಸ್ತುತ ಟೆಸ್ಟ್ ಶ್ರೇಯಾಂಕದಲ್ಲಿ ವಿಶ್ವದ 2ನೇ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು 37 ರ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ.

ಅಕ್ಷರ್ ಪಟೇಲ್: ಟೀಮ್ ಇಂಡಿಯಾದ ಯುವ ಆಲ್ರೌಂಡರ್ ಅಕ್ಷರ್ ಪಟೇಲ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಕಳೆದ 12 ತಿಂಗಳಲ್ಲಿ ಅಕ್ಷರ್ 32.6 ರನ್ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.

ಮೊಹಮ್ಮದ್ ಶಮಿ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ರನ್ಗಳಿಕೆಯ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಶಮಿ ಕಳೆದೊಂದು ವರ್ಷದಲ್ಲಿ 21.8 ಸರಾಸರಿಯಲ್ಲಿ ಸ್ಕೋರ್ಗಳಿಸಿದ್ದಾರೆ.

ವಿರಾಟ್ ಕೊಹ್ಲಿ: ಭಾರತದ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವುದೇ ಅಚ್ಚರಿ. ಕಳೆದೊಂದು ವರ್ಷದಲ್ಲಿ ಟೆಸ್ಟ್ನಲ್ಲಿ ಕೇವಲ 21.2 ರನ್ ಸರಾಸರಿಯಲ್ಲಿ ಮಾತ್ರ ಕೊಹ್ಲಿ ರನ್ಗಳಿಸಿದ್ದಾರೆ.

ಕೆಎಲ್ ರಾಹುಲ್: ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ 9ನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಕಳೆದೊಂದು ವರ್ಷದಲ್ಲಿ ಕೇವಲ 13.6 ಸರಾಸರಿಯಲ್ಲಿ ರನ್ಗಳಿಸಿದ್ದಾರೆ. ಇದಾಗ್ಯೂ ರಾಹುಲ್ಗೆ ಸತತವಾಗಿ ಅವಕಾಶ ನೀಡುತ್ತಿರುವ ಬಗ್ಗೆ ಇದೀಗ ಪ್ರಶ್ನೆಗಳೆದ್ದಿವೆ.

ಈ ಅಂಕಿ ಅಂಶಗಳನ್ನು ಗಮನಿಸಿದರೆ, ಕಳೆದೊಂದು ವರ್ಷದಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳೇ ಹೆಚ್ಚು ರನ್ಗಳಿಸಿದ್ದಾರೆ. ಅದರಲ್ಲೂ ಆಲ್ರೌಂಡರ್ಗಳು ಮಿಂಚಿರುವುದು ಸ್ಪಷ್ಟ. ಅದೇ ಸಮಯದಲ್ಲಿ ಅಗ್ರ ಕ್ರಮಾಂಕದ ಕೆಲ ಅಗ್ರ ಬ್ಯಾಟ್ಸ್ಮನ್ಗಳ ಸರಾಸರಿ ಬೌಲರ್ಗಳಿಗಿಂತ ಕಡಿಮೆ ಇರುವುದೇ ಅಚ್ಚರಿ..!
Published On - 2:45 pm, Sun, 26 February 23









