- Kannada News Photo gallery Cricket photos TNPL 2023 18 Runs in 1 Ball The Most Expensive Final Delivery in T20 history
TNPL 2023: ಕೊನೆಯ ಎಸೆತದಲ್ಲಿ 18 ರನ್! ಇತಿಹಾಸ ಸೃಷ್ಟಿಸಿದ ತಮಿಳುನಾಡು ಪ್ರೀಮಿಯರ್ ಲೀಗ್
TNPL 2023: ಸೇಲಂ ಸ್ಪಾರ್ಟನ್ಸ್ ತಂಡದ ವೇಗಿ ಅಭಿಷೇಕ್ ತನ್ವರ್ ಇನ್ನಿಂಗ್ಸ್ನ ಕೊನೆಯ ಓವರ್ ಬೌಲ್ ಮಾಡಿ ಈ ಓವರ್ನ ಕೊನೆಯ ಎಸೆತದಲ್ಲಿ ಬರೋಬ್ಬರಿ 18 ರನ್ ನೀಡಿ ಟಿ20 ಕ್ರಿಕೆಟ್ನಲ್ಲಿ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು.
Updated on:Jun 14, 2023 | 8:11 AM

ಸಾಮಾನ್ಯವಾಗಿ ನಾವು ಟಿ20 ಕ್ರಿಕೆಟ್ನಲ್ಲಿ ಒಬ್ಬ ಬ್ಯಾಟರ್ 6 ಬಾಲ್ಗೆ 6 ಸಿಕ್ಸರ್ ಹೊಡೆಯವುದನ್ನು ನೋಡಿದ್ದೇವೆ. ಹಾಗೆಯೇ ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವುದನ್ನು ನೋಡಿದ್ದೇವೆ. ಆದರೆ ಜೂ.12 ರಿಂದ ಆರಂಭವಾಗಿರುವ ತಮಿಳುನಾಡು ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ನ ಇತಿಹಾಸದಲ್ಲಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.

ಜೂ.13 ರಂದು ನಡೆದ ಲೀಗ್ನ 2ನೇ ಪಂದ್ಯ ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಸೇಲಂ ಸ್ಪಾರ್ಟನ್ಸ್ ತಂಡದ ವೇಗಿ ಅಭಿಷೇಕ್ ತನ್ವರ್ ಇನ್ನಿಂಗ್ಸ್ನ ಕೊನೆಯ ಓವರ್ ಬೌಲ್ ಮಾಡಿ ಈ ಓವರ್ನ ಕೊನೆಯ ಎಸೆತದಲ್ಲಿ ಬರೋಬ್ಬರಿ 18 ರನ್ ನೀಡಿ ಟಿ20 ಕ್ರಿಕೆಟ್ನಲ್ಲಿ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು.

ವಾಸ್ತವವಾಗಿ ಅಭಿಷೇಕ್ ತನ್ವರ್ ಎಸೆದ 20ನೇ ಓವರ್ನ ಕೊನೆಯ ಎಸೆತವನ್ನು ಚೆಪಾಕ್ ಸೂಪರ್ ಗಿಲ್ಲಿಸ್ ತಂಡದ ಬ್ಯಾಟರ್ ಸಂಜಯ್ ಯಾದವ್ ಎದುರಿಸಿದರು. ಆದರೆ ಈ ಎಸೆತದಲ್ಲಿ ಅವರು ಕ್ಲಿನ್ ಬೌಲ್ಡ್ ಆದರು. ಆದರೆ ದುರಾದೃಷ್ಟ ಎಂಬಂತೆ ಈ ಎಸೆತ ನೋ ಬಾಲ್ ಆಗಿತ್ತು.

ನೋ ಬಾಲ್ನ ಪ್ರಯೋಜನ ಪಡೆದ ಸಂಜಯ್ ಯಾದವ್, ಭರ್ಜರಿ ಸಿಕ್ಸರ್ ಸಿಡಿಸಿದರು. ಅಚ್ಚರಿ ಎಂಬಂತೆ ಆ ಚೆಂಡು ಮತ್ತೆ ನೋ ಬಾಲ್ ಆಯಿತು. ಇಲ್ಲಿಯವರೆಗೆ 8 ರನ್ ನೀಡಿದ ಅಭಿಷೇಕ್ ತನ್ವರ್ ಮತ್ತೊಂದು ಬಾಲ್ ಮಾಡಿದರು. ಈ ಎಸೆತದಲ್ಲಿ ಬ್ಯಾಟ್ಸ್ಮನ್ 2 ರನ್ ತೆಗೆದುಕೊಂಡರು.

ಆದರೆ ಚೆಂಡು ಮತ್ತೆ ನೋ ಬಾಲ್ ಆಯಿತು. ದುರಾದೃಷ್ಟವೆಂಬಂತೆ ಮುಂದಿನ ಚೆಂಡು ನೋ ಬಾಲ್ ಆಗದೆ ವೈಡ್ ಆಯಿತು. ಇದರೊಂದಿಗೆ ಬೌಲರ್ ಕೊನೆಯ ಎಸೆತ ಇನ್ನೂ ಬಾಕಿ ಇರುವಾಗಲೇ 12 ರನ್ ನೀಡಿದ್ದರು.

ಅಂತಿಮವಾಗಿ ಕೊನೆಯ ಬಾಲ್ನಲ್ಲೂ ಕೂಡ ಸಂಜಯ್ ಯಾದವ್ ಸಿಕ್ಸರ್ ಬಾರಿಸಿದರು. ಈ ಮೂಲಕ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ 18 ರನ್ ಬಂದವು. ಒಟ್ಟಾರೆ 20ನೇ ಓವರ್ನ ಕೊನೆಯ ಎಸೆತದಲ್ಲಿ 3 ನೋ ಬಾಲ್ ಮತ್ತು 1 ವೈಡ್ ಸೇರಿದಂತೆ ಬೌಲರ್ 18 ರನ್ ನೀಡಿದರು.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆಪಾಕ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 217 ರನ್ ಕಲೆಹಾಕಿತು. ಇದರಲ್ಲಿ ಕೊನೆಯ ಎಸೆತದಲ್ಲಿ 18 ರನ್ ಗಳಿಸಿದ ಸಂಜಯ್ ಯಾದವ್ 12 ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದರು. 218 ರನ್‌ಗಳನ್ನು ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ ಕೇವಲ 169 ರನ್ ಗಳಿಸಲಷ್ಟೇ ಶಕ್ತವಾಗಿ 52 ರನ್‌ಗಳ ಅಂತರದಿಂದ ಸೋಲನುಭವಿಸಿತು.
Published On - 8:07 am, Wed, 14 June 23




