ತಮಿಳುನಾಡು ಪ್ರೀಮಿಯರ್ ಲೀಗ್ನ (TNPL 2024) ಕ್ವಾಲಿಫೈಯರ್ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಯುವ ಎಡಗೈ ದಾಂಡಿಗ ಸಾಯಿ ಸುದರ್ಶನ್ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ದಿಂಡಿಗುಲ್ನ ಎನ್ಪಿಆರ್ ಕಾಲೇಜ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಲೈಕಾ ಕೋವೈ ಕಿಂಗ್ಸ್ ಮತ್ತು ತಿರುಪ್ಪೂರ್ ತಮಿಳನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ತಿರುಪ್ಪೂರ್ ತಮಿಳನ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಅಮಿತ್ ಸಾತ್ವಿಕ್ 42 ಎಸೆತಗಳಲ್ಲಿ 67 ರನ್ ಬಾರಿಸಿದರೆ, ತುಷಾರ್ ರಹೇಜಾ 31 ಎಸೆತಗಳಲ್ಲಿ 55 ರನ್ ಸಿಡಿಸಿದರು. ಇನ್ನು ಮೊಹಮ್ಮದ್ ಅಲಿ 23 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 45 ರನ್ ಚಚ್ಚಿದ್ದರು. ಈ ಮೂಲಕ ತಿರುಪ್ಪೂರ್ ತಮಿಳನ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 200 ರನ್ ಕಲೆಹಾಕಿತು.
201 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಕೋವೈ ಕಿಂಗ್ಸ್ ತಂಡವು ಮೊದಲ ಎಸೆತದಲ್ಲೇ ವಿಘ್ನೇಶ್ (0) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಸುಜಯ್ (19) ಕೂಡ ಔಟಾದರು. ಆ ಬಳಿಕ ಬಂದ ಜಯರಾಮನ್ ಕೇವಲ 5 ರನ್ಗಳಿಸಿ ನಿರ್ಗಮಿಸಿದರು. ಇದಾಗ್ಯೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಒಂದೆಡೆ ಗಟ್ಟಿಯಾಗಿ ನೆಲೆ ನಿಂತಿದ್ದರು.
4ನೇ ವಿಕೆಟ್ಗೆ ಮುಕಿಲೇಶ್ ಜೊತೆಗೂಡಿದ ಸಾಯಿ ಸುದರ್ಶನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಲಾರಂಭಿಸಿದರು. ಸಾಯಿಯ ಅಬ್ಬರ ಶುರುವಾಗುತ್ತಿದ್ದಂತೆ ಅತ್ತ ತಿರುಪ್ಪೂರ್ ತಮಿಳನ್ಸ್ ಬೌಲರ್ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ಸಾಯಿ ಸಿಕ್ಸ್-ಫೋರ್ಗಳ ಸುರಿಮಳೆಗೈಯ್ಯಲಾರಂಭಿಸಿದರು.
ಅಲ್ಲದೆ ಟಿ ನಟರಾಜನ್ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಸಾಯಿ ಸುದರ್ಶನ್ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿದರು. ಸೆಂಚುರಿ ಬಳಿಕವೂ ಅಬ್ಬರ ಮುಂದುವರೆಸಿದ ಸಾಯಿ 56 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 123 ರನ್ ಬಾರಿಸಿದರು. ಪರಿಣಾಮ ಲೈಕಾ ಕೋವೈ ಕಿಂಗ್ಸ್ ತಂಡವು 18.5 ಓವರ್ಗಳಲ್ಲಿ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತು.
ಈ 123 ರನ್ಗಳೊಂದಿಗೆ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ವೈಯುಕ್ತಿಕ ಗರಿಷ್ಠ ಸ್ಕೋರ್ಗಳಿಸಿದ ಬ್ಯಾಟರ್ ಎಂಬ ದಾಖಲೆ ಸಾಯಿ ಸುದರ್ಶನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮುರಳಿ ವಿಜಯ್ ಹೆಸರಿನಲ್ಲಿತ್ತು. 2022ರ ಸೀಸನ್ನಲ್ಲಿ ಮುರಳಿ ವಿಜಯ್ 66 ಎಸೆತಗಳಲ್ಲಿ 121 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಸ್ಪೋಟಕ ಸೆಂಚುರಿಯೊಂದಿಗೆ ಸಾಯಿ ಸುದರ್ಶನ್ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Published On - 10:53 am, Wed, 31 July 24