- Kannada News Photo gallery Cricket photos IND vs SL 3rd t20i Back to back ducks for sanju samson kannada news
IND vs SL: 6 ಇನ್ನಿಂಗ್ಸ್ಗಳಲ್ಲಿ 3 ಸೊನ್ನೆ; ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ಕಥೆ ಮುಗಿದ ಅಧ್ಯಾಯ?
Sanju Samson: ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ನಿರಸ ಪ್ರದರ್ಶನದೊಂದಿಗೆ ಸಂಜು ಸ್ಯಾಮ್ಸನ್ ಅವರ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಬದುಕಿಗೂ ಕಂಟಕ ಎದುರಾಗಿದೆ. ಏಕೆಂದರೆ ಕಳೆದ 6 ಪಂದ್ಯಗಳಲ್ಲಿ ಸಂಜು ಮೂರು ಬಾರಿ ಖಾತೆ ತೆರೆಯದೆ ಔಟಾಗಿದ್ದು, ಒಂದು ಇನ್ನಿಂಗ್ಸ್ನಲ್ಲಿ ಮಾತ್ರ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.
Updated on: Jul 30, 2024 | 9:46 PM

ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭದಲ್ಲೇ ಆಘಾತ ಎದುರಿಸಿದ್ದು, ಕೇವಲ 14 ರನ್ಗಳಿಗೆ ತಂಡ 3 ವಿಕೆಟ್ ಕಳೆದುಕೊಂಡಿತು.

ಆರಂಭಿಕರಾಗಿ ಕಣಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್ ಕಳೆದೆರಡು ಪಂದ್ಯಗಳಂತೆ ಈ ಪಂದ್ಯದಲ್ಲಿ ಕಮಾಲ್ ಮಾಡುವಲ್ಲಿ ವಿಫಲರಾದರು. ಹೀಗಾಗಿ ಜೈಸ್ವಾಲ್ 10 ರನ್ಗಳಿಗೆ ಇನ್ನಿಂಗ್ಸ್ ಮುಗಿಸಬೇಕಾಯಿತು. ಆ ನಂತರ ಬಂದ ಸಂಜು ಸ್ಯಾಮ್ಸನ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಏಕೆಂದರೆ ಇದು ಅವರ ಪಾಲಿನ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು.

ಸರಣಿಯ ಎರಡನೇ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್ ತಾನು ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಮುಂದಿನ ಸರಣಿಗೆ ತಂಡದಲ್ಲಿ ಅವಕಾಶ ಪಡೆಯಬೇಕಾದರೆ ಕೊನೆಯ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಲೇಬೇಕಿತ್ತು. ಇದಕ್ಕೆ ಪೂರಕವಾಗಿ ಅವರಿಗೆ ಬಹು ಬೇಗನೇ ಬ್ಯಾಟಿಂಗ್ ಆರಂಭಿಸುವ ಅವಕಾಶ ಸಿಕ್ಕಿತ್ತು.

ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದ ಸಂಜು ಸ್ಯಾಮ್ಸನ್ ಸತತ ಎರಡನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಯಶಸ್ವಿ ಜೈಸ್ವಾಲ್ ವಿಕೆಟ್ ಪತನದ ಬಳಿಕ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಸಂಜು ಸ್ಯಾಮ್ಸನ್ಗೆ 4 ಎಸೆತಗಳನ್ನು ಎದುರಿಸಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.

ಶ್ರೀಲಂಕಾ ಪರ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಚಮಿಂದು ವಿಕ್ರಮಸಿಂಘೆ ತಮ್ಮ ಕೋಟಾದ ಎರಡನೇ ಓವರ್‌ನ 5ನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ವಿಕೆಟ್ ಉರುಳಿಸಿದರು. ಬಿಗ್ ಶಾಟ್ ಹೊಡೆಯಲು ಯತ್ನಿಸುತ್ತಿದ್ದ ಸಂಜು, ಹಸರಂಗಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಸಂಜು ತಮ್ಮ ಹೆಸರಿನಲ್ಲಿ ಬೇಡದ ದಾಖಲೆಯನ್ನೂ ನಿರ್ಮಿಸಿದರು.

ವಾಸ್ತವವಾಗಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವರ್ಷದಲ್ಲಿ ಮೂರು ಬಾರಿ ಡಕ್‌ಗೆ ಬಲಿಯಾದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಕುಖ್ಯಾತಿಗೆ ಸಂಜು ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2009ರಲ್ಲಿ ಯೂಸುಫ್ ಪಠಾಣ್, 2018 ಮತ್ತು 2022ರಲ್ಲಿ ರೋಹಿತ್ ಶರ್ಮಾ, 2024ರಲ್ಲಿ ವಿರಾಟ್ ಕೊಹ್ಲಿ ಮೂರು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

ಅಷ್ಟೇ ಅಲ್ಲ, ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಡಕ್‌ಗೆ ಔಟಾದ ಭಾರತೀಯ ವಿಕೆಟ್‌ಕೀಪರ್ (3) ಎಂಬ ಹೆಗ್ಗಳಿಕೆಗೆ ಸಂಜು ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ರಿಷಬ್ ಪಂತ್ (4) ಅಗ್ರಸ್ಥಾನದಲ್ಲಿದ್ದಾರೆ.

ಈ ನಿರಸ ಪ್ರದರ್ಶನದೊಂದಿಗೆ ಸಂಜು ಸ್ಯಾಮ್ಸನ್ ಅವರ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಬದುಕಿಗೂ ಕಂಟಕ ಎದುರಾಗಿದೆ. ಏಕೆಂದರೆ ಕಳೆದ 6 ಪಂದ್ಯಗಳಲ್ಲಿ ಸಂಜು ಮೂರು ಬಾರಿ ಖಾತೆ ತೆರೆಯದೆ ಔಟಾಗಿದ್ದು, ಒಂದು ಇನ್ನಿಂಗ್ಸ್ನಲ್ಲಿ ಮಾತ್ರ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.




