ಐತಿಹಾಸಿಕ ಸಾಧನೆ: ಟೀಮ್ ಇಂಡಿಯಾದ ವಿಶ್ವ ದಾಖಲೆ ಮುರಿದ ಯುಎಸ್ಎ
ICC Cricket World Cup League-2: ಐಸಿಸಿ ಕ್ರಿಕೆಟ್ ವರ್ಲ್ಡ್ಕಪ್ ಲೀಗ್-2 ಪಂದ್ಯದಲ್ಲಿ ಯುಎಸ್ಎ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಅದು ಕೂಡ ಒಮಾನ್ ತಂಡವನ್ನು ಬರೋಬ್ಬರಿ 57 ರನ್ಗಳಿಂದ ಸೋಲಿಸುವ ಮೂಲಕ. ಈ ಗೆಲುವಿನೊಂದಿಗೆ ಯುಎಸ್ಎ ತಂಡ ಟೀಮ್ ಇಂಡಿಯಾ ಹೆಸರಿನಲ್ಲಿದ್ದ 40 ವರ್ಷಗಳ ಹಳೆಯ ದಾಖಲೆಯನ್ನು ಸಹ ಮುರಿದಿದೆ.
Updated on: Feb 20, 2025 | 9:04 AM

ಏಕದಿನ ಕ್ರಿಕೆಟ್ನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (USA) ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಟೀಮ್ ಇಂಡಿಯಾ ಹೆಸರಿನಲ್ಲಿದ್ದ 40 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಇಂತಹದೊಂದು ವಿಶ್ವ ದಾಖಲೆ ನಿರ್ಮಾಣವಾಗಿದ್ದು ಐಸಿಸಿ ವಿಶ್ವಕಪ್ ಲೀಗ್-2 ಪಂದ್ಯದಲ್ಲಿ.

ಅಲ್ ಅಮಿರಾತ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಯುಎಸ್ಎ ಮತ್ತು ಒಮಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಒಮಾನ್ ತಂಡ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಸ್ಎ ಪರ ಮಿಲಿಂದ್ ಕುಮಾರ್ 47 ರನ್ ಬಾರಿಸಿದರು. ಈ 47 ರನ್ಗಳ ನೆರವಿನಿಂದ ಯುಎಸ್ಎ ತಂಡ 35.3 ಓವರ್ಗಳಲ್ಲಿ ಕೇವಲ 122 ರನ್ಗಳಿಸಿ ಆಲೌಟ್ ಆಯಿತು.

122 ರನ್ಗಳ ಸುಲಭ ಗುರಿ ಬೆನ್ನತ್ತಿದ ಒಮಾನ್ ತಂಡವು ನೋಸ್ತುಷ್ ಕೆಂಜಿಗೆ ಅವರ ಸ್ಪಿನ್ ಮೋಡಿಗೆ ತತ್ತರಿಸಿದೆ. 7.3 ಓವರ್ಗಳನ್ನು ಎಸೆದ ನೋಸ್ತುಷ್ ಕೇವಲ 11 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಪರಿಣಾಮ ಒಮಾನ್ ತಂಡವು 25.3 ಓವರ್ಗಳಲ್ಲಿ ಕೇವಲ 65 ರನ್ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಯುಎಸ್ಎ ತಂಡ 57 ರನ್ಗಳ ಭರ್ಜರಿ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ರನ್ಗಳಿಸಿ ಗೆದ್ದ ತಂಡವೆಂಬ ವಿಶ್ವ ದಾಖಲೆ ಯುಎಸ್ಎ ತಂಡದ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಭಾರತ ತಂಡದ ಹೆಸರಿನಲ್ಲಿತ್ತು. ಟೀಮ್ ಇಂಡಿಯಾ 1985 ರಲ್ಲಿ ಅತ್ಯಲ್ಪ ಮೊತ್ತಗಳಿಸಿ ವಿಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

1985 ರಲ್ಲಿ ನಡೆದ ರೋಥ್‌ಮನ್ ಫೋರ್-ನೇಷನ್ ಕಪ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 125 ರನ್ ಮಾತ್ರ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವನ್ನು ಕೇವಲ 87 ರನ್ಗಳಿಗೆ ಆಲೌಟ್ ಮಾಡುವಲ್ಲಿ ಭಾರತೀಯ ಬೌಲರ್ಗಳು ಯಶಸ್ವಿಯಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ 38 ರನ್ಗಳ ಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಅತ್ಯಲ್ಪ ರನ್ಗಳಿಸಿ ಗೆದ್ದ ತಂಡವೆಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿತ್ತು.

ಆದರೀಗ ಯುಎಸ್ಎ ತಂಡವು 122 ರನ್ಗಳಿಸಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತ ತಂಡದ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದೆ. ಅಲ್ಲದೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ರನ್ಗಳಿಸಿ 50 ಕ್ಕಿಂತ ಅಧಿಕ ರನ್ಗಳಿಂದ ಗೆದ್ದ ವಿಶ್ವದ ಏಕೈಕ ತಂಡ ಎಂಬ ದಾಖಲೆಯನ್ನು ಸಹ ಯುಎಸ್ಎ ನಿರ್ಮಿಸಿದೆ.



















