
ಕ್ರಿಕೆಟ್ ಜಗತ್ತಿನಲ್ಲಿ 'ಮಿಸ್ಟರ್ 360' ಎಬಿ ಡಿವಿಲಿಯರ್ಸ್ ನಿರ್ಮಿಸಿದ್ದ ಅಸಾಧ್ಯವೆಂದು ಭಾವಿಸಲಾಗಿದ್ದ ದಾಖಲೆಯೊಂದನ್ನು ಭಾರತದ 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಧೂಳೀಪಟ ಮಾಡಿದ್ದಾರೆ. ಅದು ಸಹ ಸಿಡಿಲಬ್ಬರದ ದ್ವಿಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. (PC: BCCI)
ದೋಹಾದಲ್ಲಿ ನಡೆದ ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ಆರ್ಭಟಿಸಿದ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಚಚ್ಚಿದ್ದರು. ಈ ಸಿಡಿಲಬ್ಬರದ ಡಬಲ್ ಸೆಂಚುರಿಯೊಂದಿಗೆ ವೈಭವ್ ಅತ್ಯುತ್ತಮ ಸ್ಟ್ರೈಕ್ ರೇಟ್ನೊಂದಿಗೆ ಲಿಸ್ಟ್ ಎ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. (PC: BCCI)
ಅಂದರೆ, ಏಕದಿನ ಮಾದರಿ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸ್ಟ್ರೈಕ್ ರೇಟ್‌ನಲ್ಲಿ ಶತಕ ಸಿಡಿಸಿದ ವಿಶ್ವ ದಾಖಲೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿತ್ತು. 2015ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಎಬಿಡಿ ಕೇವಲ 44 ಎಸೆತಗಳಲ್ಲಿ 149 ರನ್ ಬಾರಿಸಿದ್ದರು. ಈ ವೇಳೆ ಅವರ ಸ್ಟ್ರೈಕ್ ರೇಟ್ 338.63 ಆಗಿತ್ತು. ಈ ಮೂಲಕ ಶತಕದ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ದಾಖಲಿಸಿದ ವಿಶ್ವ ದಾಖಲೆಯನ್ನು ಅವರು ನಿರ್ಮಿಸಿದ್ದರು. (PC: CSA)
ಇದೀಗ ಈ ವಿಶ್ವ ದಾಖಲೆಯನ್ನು 15 ವರ್ಷದ ಪೋರ ವೈಭವ್ ಸೂರ್ಯವಂಶಿ ಧೂಳೀಪಟ ಮಾಡಿದ್ದಾರೆ. ನವೆಂಬರ್ 24 ರಂದು ಯುಎಇ ಬೌಲರ್‌ಗಳನ್ನು ಅಕ್ಷರಶಃ ಚೆಂಡಾಡಿದ ವೈಭವ್, ಬರೋಬ್ಬರಿ 384.90 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಎಬಿಡಿ ಅವರ 11 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. (PC: BCCI)
ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸ್ಟ್ರೈಕ್ ರೇಟ್‌ನಲ್ಲಿ ಶತಕ ಹಾಗೂ ದ್ವಿಶತಕ ಸಿಡಿಸಿದ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ, ಈ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ವೃತ್ತಿಪರ ಕ್ರಿಕೆಟ್ ಹಾಗೂ ಲಿಸ್ಟ್-ಎ ಇತಿಹಾಸದ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ನೂತನ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ. (PC: BCCI)