
ಇಂಗ್ಲೆಂಡ್ ವಿರುದ್ಧ ಹರಾರೆಯಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಯುವ ಸ್ಫೋಟಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ತೂಫಾನ್ ಶತಕ ಸಿಡಿಸಿದರು. ಈ ಪಂದ್ಯದಲ್ಲಿ ವೈಭವ್ ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ, ಅವರು 15 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳನ್ನು ಬಾರಿಸಿದರು, 218.75 ರ ಸ್ಟೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ವೈಭವ್ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನು ಬರೆದರು.

ಇದು ಮಾತ್ರವಲ್ಲ ಈ 175 ರನ್‌ಗಳ ಇನ್ನಿಂಗ್ಸ್ ಮೂಲಕ ವೈಭವ್ ಹಲವು ದಾಖಲೆಗಳನ್ನು ನಿರ್ಮಿಸಿದರು. ಹೊಡಿಬಡಿ ಆಟದ ಮೂಲಕ ತಮ್ಮ ಇನ್ನಿಂಗ್ಸ್ ಆರಂಭಿಸಿದ ವೈಭವ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ 55 ಎಸೆತಗಳಲ್ಲಿ ಶತಕ ದಾಟಿದರು. ವೈಭವ್ ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ 80 ರನ್ ಕಲೆಹಾಕಿದರು. ಈ ಮೂಲಕ ವೈಭವ್ ಅಂಡರ್-19 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು.

ಈ ಶತಕದ ಇನ್ನಿಂಗ್ಸ್ ಮೂಲಕ ವೈಭವ್ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವಿಶ್ವಕಪ್ನಲ್ಲಿ 7 ಪಂದ್ಯಗಳನ್ನಾಡಿದ ವೈಭವ್ 62.71 ಸರಾಸರಿಯಲ್ಲಿ 439 ರನ್ ಬಾರಿಸಿದರು. ಇದರಲ್ಲಿ 1 ಶತಕ ಮತ್ತು 3 ಅರ್ಧಶತಕಳು ಸೇರಿವೆ. ಈ 7 ಇನ್ನಿಂಗ್ಸ್‌ಗಳಲ್ಲಿ, ವೈಭವ್ 41 ಬೌಂಡರಿಗಳು ಮತ್ತು 30 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದು ಕೂಡ ದಾಖಲೆಯಾಗಿದೆ.

ಫೈನಲ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವೈಭವ್ ಸೂರ್ಯವಂಶಿ ಅಂಡರ್ -19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆಯೂ ವೈಭವ್ ಪಾಲಾಗಿದೆ. ಇದರ ಜೊತೆಗೆ ಇಂಗ್ಲೆಂಡ್ ವಿರುದ್ಧ 19 ವರ್ಷದೊಳಗಿನವರ ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ವೈಭವ್. ಇಂಗ್ಲೆಂಡ್ ವಿರುದ್ಧ ಸರಾಗವಾಗಿ ರನ್ ಕಲೆಹಾಕಿರುವ ವೈಭವ್ ಇದೇ ಇಂಗ್ಲೆಂಡ್ ವಿರುದ್ಧ ತಮ್ಮ ವೇಗದ ಶತಕವನ್ನೂ ಸಿಡಿಸಿದ್ದಾರೆ.

ವೈಭವ್ ಸೂರ್ಯವಂಶಿ ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೆಯೇ 19 ವರ್ಷದೊಳಗಿನವರ ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯೂ ವೈಭವ್ ಪಾಲಾಗಿದೆ. ಇದರೊಂದಿಗೆ ವೈಭವ್ ಅಂಡರ್-19 ಏಕದಿನ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.