ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15ನ ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ದತೆಯಲ್ಲಿದೆ. ಅದರಲ್ಲೂ ಹೊಸ ಎರಡು ಫ್ರಾಂಚೈಸಿಗಳು ಸೇರಿ ಒಟ್ಟು ಐದು ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿದೆ. ಅದರಂತೆ ಕೆಕೆಆರ್, ಪಂಜಾಬ್ ಕಿಂಗ್ಸ್, ಆರ್ಸಿಬಿ, ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಬೇಕಿದೆ.
ಈ ಬಾರಿಯ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಆರ್ಸಿಬಿ ತಂಡದ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ ನೀಡಿದ್ದರು. ಕೆಲಸದ ಒತ್ತಡ ಹೆಚ್ಚಾಗಿರುವ ಕಾರಣ ನಾಯಕನಾಗಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಹೀಗಾಗಿಯೇ ಆರ್ಸಿಬಿ ತಂಡದ ಹೊಸ ನಾಯಕನ ವಿಚಾರ ಚರ್ಚೆಯಲ್ಲಿದೆ.
ಆದರೆ ಇದೀಗ ಆರ್ಸಿಬಿ ತಂಡದ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆಯಿದೆ. ಏಕೆಂದರೆ ಆರ್ಸಿಬಿ ಇದೀಗ ವಿರಾಟ್ ಕೊಹ್ಲಿ ಅವರನ್ನೇ ಮತ್ತೊಮ್ಮೆ ನಾಯಕನಾಗಿ ಘೋಷಿಸಲಿದೆ ಎಂದು ವರದಿಯಾಗಿದೆ.
ಈ ಹಿಂದೆ ಕೆಲಸದ ಹೊರೆಯಿಂದಾಗಿ ವಿರಾಟ್ ಕೊಹ್ಲಿ ಆರ್ಸಿಬಿ, ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿಯನ್ನು ಟೀಮ್ ಇಂಡಿಯಾ ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಸದ್ಯ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ.
ಅಂದರೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟಿ20 ಹಾಗೂ ಏಕದಿನ ತಂಡಗಳ ನಾಯಕನ ಹೊರೆ ಕಡಿಮೆಯಾಗಿದೆ. ಇತ್ತ ನಾಯಕನ ಜವಾಬ್ದಾರಿ ಕಡಿಮೆಯಾಗಿರುವ ಕಾರಣ ಕೊಹ್ಲಿಯ ಒತ್ತಡ ಕೂಡ ಕಡಿಮೆಯಾಗಲಿದೆ. ಹೀಗಾಗಿ ಮತ್ತೊಮ್ಮೆ ಆರ್ಸಿಬಿ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಅತ್ತ ಟೀಮ್ ಇಂಡಿಯಾ ಟಿ20 ಹಾಗೂ ಏಕದಿನ ತಂಡ ನಾಯಕತ್ವ ವಿರಾಟ್ ಕೊಹ್ಲಿ ಕೈತಪ್ಪುತ್ತಿದ್ದಂತೆ ಇತ್ತ ಆರ್ಸಿಬಿಗೆ ಮುಂದಿನ ಸೀಸನ್ನಲ್ಲೂ ವಿರಾಟ್ ಕೊಹ್ಲಿಯೇ ನಾಯಕ ಎನ್ನಲಾಗುತ್ತಿದೆ. ಹೀಗಾಗಿ ಮುಂದಿನ ಸೀಸನ್ನಲ್ಲೂ ವಿರಾಟ್ ಕೊಹ್ಲಿಯೇ ಆರ್ಸಿಬಿ ತಂಡವನ್ನು ಮುನ್ನಡೆಸಿದರೂ ಅಚ್ಚರಿಪಡಬೇಕಿಲ್ಲ.
Published On - 6:26 pm, Sat, 18 December 21