DPL 2025: ಕ್ರಿಕೆಟ್ ಅಂಗಳಕ್ಕೆ ಆರ್ಯವೀರ್ ಕೊಹ್ಲಿ ಎಂಟ್ರಿ
DPL 2025: ದೆಹಲಿ ಪ್ರೀಮಿಯರ್ ಲೀಗ್ನ ಎರಡನೇ ಆವೃತ್ತಿ ಆಗಸ್ಟ್ 17 ರಿಂದ ಶುರುವಾಗಲಿದೆ. 8 ತಂಡಗಳ ನಡುವಣ ಈ ಕ್ರಿಕೆಟ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯ ಅಣ್ಣನ ಮಗ ಆರ್ಯವೀರ್ ಕೊಹ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅದು ಕೂಡ ಆಯುಷ್ ಬದೋನಿ, ಪ್ರಿಯಾಂಶ್ ಆರ್ಯ ಸೇರಿದಂತೆ ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಸೌತ್ ದಿಲ್ಲಿ ಸೂಪರ್ ಸ್ಟಾರ್ಸ್ ತಂಡದಲ್ಲಿ ಎಂಬುದು ವಿಶೇಷ.
ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ (Virat Kohli) ಅಣ್ಣನ ಮಗ ಆರ್ಯವೀರ್ ಕೊಹ್ಲಿ (Aryaveer Kohli) ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅದು ಕೂಡ ದೆಹಲಿ ಪ್ರೀಮಿಯರ್ ಲೀಗ್ಗೆ ಆಯ್ಕೆಯಾಗುವ ಮೂಲಕ ಎಂಬುದು ವಿಶೇಷ. ದೆಹಲಿಯಲ್ಲಿ ನಡೆಯಲಿರುವ ಡಿಪಿಎಲ್ ಸೀಸನ್-2 ಗೆ ಸೌತ್ ದಿಲ್ಲಿ ಸೂಪರ್ ಸ್ಟಾರ್ಸ್ ಫ್ರಾಂಚೈಸಿ ಆರ್ಯವೀರ್ ಅವರನ್ನು ಖರೀದಿಸಿದೆ.
1 / 5
ಇದೇ ಮೊದಲ ಬಾರಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಆರ್ಯವೀರ್ ಕೊಹ್ಲಿಯನ್ನು ಸೌತ್ ದಿಲ್ಲಿ ಸೂಪರ್ ಸ್ಟಾರ್ಸ್ 1 ಲಕ್ಷ ರೂ.ಗೆ ಬಿಡ್ ಮಾಡಿದ್ದು, ಈ ಮೂಲಕ ಯುವ ಆಟಗಾರನನ್ನು ತನ್ನ ಬಳಗಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಎಂದರೆ ಆರ್ಯವೀರ್ ಬ್ಯಾಟ್ಸ್ಮನ್ ಅಲ್ಲ. ಬದಲಾಗಿ ಸ್ಪಿನ್ ಬೌಲಿಂಗ್ ಮೂಲಕ ಕೆರಿಯರ್ ಆರಂಭಿಸಿದ್ದಾರೆ. ಇದೀಗ ಸ್ಪರ್ಧಾತ್ಮಕ ಕ್ರಿಕೆಟ್ಗೆ ಎಂಟ್ರಿ ಕೊಡುವ ಮೂಲಕ ಕೊಹ್ಲಿಯ ನೆಪ್ಯೂ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
2 / 5
ಅಂದಹಾಗೆ ಆರ್ಯವೀರ್, ವಿರಾಟ್ ಕೊಹ್ಲಿಯ ಸಹೋದರ ವಿಕಾಸ್ ಕೊಹ್ಲಿ ಅವರ ಪುತ್ರ. ಕಳೆದ ಕೆಲ ವರ್ಷಗಳಿಂದ ವಿರಾಟ್ ಅವರ ಬಾಲ್ಯದ ತರಬೇತುದಾರ ರಾಜ್‌ಕುಮಾರ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ಪಶ್ಚಿಮ ದೆಹಲಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದೀಗ ಚೊಚ್ಚಲ ಬಾರಿಗೆ ಸ್ಪರ್ಧಾತ್ಮಕ ಲೀಗ್ನಲ್ಲಿ ಅವಕಾಶ ಪಡೆದಿದ್ದಾರೆ.
3 / 5
ಈ ಹಿಂದೆ ದೆಹಲಿ ಅಂಡರ್-16 ತಂಡದಲ್ಲಿ ಆರ್ಯವೀರ್ ಕೊಹ್ಲಿ ಕಾಣಿಸಿಕೊಂಡಿದ್ದರು. ಅಲ್ಲೂ ಕೂಡ ಉತ್ತಮ ಸ್ಪಿನ್ ಬೌಲಿಂಗ್ನೊಂದಿಗೆ ಗಮನ ಸೆಳೆದಿದ್ದರು. ಇದೀಗ ಸೌತ್ ದಿಲ್ಲಿ ಸೂಪರ್ ಸ್ಟಾರ್ಸ್ ಫ್ರಾಂಚೈಸಿಯು 15 ವರ್ಷದ ಆರ್ಯವೀರ್ ಅವರನ್ನು ದೆಹಲಿ ಪ್ರೀಮಿಯರ್ ಲೀಗ್ನ ಎರಡನೇ ಆವೃತ್ತಿಗೆ ಆಯ್ಕೆ ಮಾಡಿ ಕೊಂಡಿದ್ದಾರೆ.
4 / 5
ಇನ್ನು ಸೌತ್ ದಿಲ್ಲಿ ಸೂಪರ್ ಸ್ಟಾರ್ಸ್ ತಂಡದ ನಾಯಕನಾಗಿ ಆಯುಷ್ ಬದೋನಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಸ್ಟಾರ್ ಆಟಗಾರರಾಗಿ ಪ್ರಿಯಾಂಶ್ ಆರ್ಯ, ದಿಗ್ವೇಶ್ ರಾಠಿ, ಅನೂಜ್ ರಾವತ್ ಸೇರಿದಂತೆ ಹಲವರು ತಂಡದಲ್ಲಿದ್ದಾರೆ. ಈ ಮೂಲಕ ಡಿಪಿಎಲ್ 2025 ಕ್ಕೆ ಸೌತ್ ದಿಲ್ಲಿ ಸೂಪರ್ ಸ್ಟಾರ್ಸ್ ಫ್ರಾಂಚೈಸಿ ಬಲಿಷ್ಠ ಪಡೆಯನ್ನೇ ರೂಪಿಸಿದೆ.