ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ವಿರಾಟ್ ಕೊಹ್ಲಿ ಸೇರಿ ಮೂವರು ಕ್ರಿಕೆಟಿಗರಿಗೆ ಆಹ್ವಾನ
Ayodhya Ram Mandir: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಜನವರಿ 22ರಂದು ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ದೇಶದ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ.
Updated on:Jan 17, 2024 | 6:38 AM

ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾದಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ (Virat Kohli) ದಂಪತಿಗೆ ಆಹ್ವಾನ ನೀಡಲಾಗಿದೆ. ಅಫ್ಘಾನಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದ ಬಳಿಕ ಮುಂಬೈಗೆ ಬಂದ ಕೊಹ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಸ್ವೀಕರಿಸಿದರು.

ಇದಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿತ್ತು. ಅದರಂತೆ ಕ್ರಿಕೆಟ್ ದೇವರು ಈ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಹಾಗೆಯೇ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೂ ಈಗಾಗಲೇ ಆಹ್ವಾನ ನೀಡಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಹ-ಪ್ರಾಂತೀಯ ಕಾರ್ಯದರ್ಶಿ ಧನಂಜಯ್ ಸಿಂಗ್ ಅವರು ಧೋನಿಗೆ ಸೋಮವಾರ ಆಹ್ವಾನ ಪತ್ರಿಕೆ ಹಸ್ತಾಂತರಿಸಿದ್ದಾರೆ. ಈ ವೇಳೆ ಬಿಜೆಪಿಯ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕರ್ಮವೀರ್ ಸಿಂಗ್ ಕೂಡ ಈ ವೇಳೆ ಹಾಜರಿದ್ದರು.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಜನವರಿ 22ರಂದು ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ದೇಶದ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಅದರಂತೆ ಕ್ರಿಕೆಟ್ ಕ್ಷೇತ್ರದಿಂದ ಸಚಿನ್, ಧೋನಿ ಹಾಗೂ ವಿರಾಟ್ ಕೊಹ್ಲಿ ಆಹ್ವಾನಿತರಾಗಿದ್ದಾರೆ.

ಬಹು ನಿರೀಕ್ಷಿತ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಉಪಸ್ಥಿತರಿರಲಿದ್ದಾರೆ. ಅಲ್ಲದೆ ಈಗಾಗಲೇ ಉದ್ಯಮಿ ಮುಖೇಶ್ ಅಂಬಾನಿ, ರತನ್ ಟಾಟಾ, ಲೆಜೆಂಡ್ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸೇರಿದಂತೆ ದೇಶದ ಕೆಲವು ಉನ್ನತ ವ್ಯಕ್ತಿಗಳಿಗೆ ಆಹ್ವಾನಗಳನ್ನು ನೀಡಲಾಗಿದೆ.
Published On - 6:36 am, Wed, 17 January 24
























