
ಆಸ್ಟ್ರೇಲಿಯಾ ಪ್ರವಾಸವನ್ನು ಸತತ 2 ಸೊನ್ನೆಗಳೊಂದಿಗೆ ಆರಂಭಿಸಿದ್ದ ವಿರಾಟ್ ಕೊಹ್ಲಿ, ಸರಣಿಯ ಕೊನೆಯ ಪಂದ್ಯದಲ್ಲಿ ಖಾತೆ ತೆರೆಯುವಲ್ಲಿ ಕೊನೆಗೂ ಯಶಸ್ವಿಯಾದರು. ಮಾತ್ರವಲ್ಲದೆ ಅಜೇಯ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದಲ್ಲಿ 74 ರನ್ ಬಾರಿಸಿದ ಕೊಹ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದರು.

ಮೂರನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಔಟಾದ ನಂತರ ವಿರಾಟ್ ಕೊಹ್ಲಿ ಮೈದಾನಕ್ಕೆ ಬಂದರು. ನಂತರ ಸಂಯಮದ ಇನ್ನಿಂಗ್ಸ್ ಆಡಿದ ಕೊಹ್ಲಿ 56 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ 50 ರನ್ ಗಳಿಸಿದರು. ಇದರೊಂದಿಗೆ, ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 2500 ರನ್‌ಗಳ ಗಡಿಯನ್ನು ತಲುಪಿದರು.

ಹಾಗೆಯೇ ಈ ಅರ್ಧಶತಕ ಮೂಲಕ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಇದುವರೆಗೆ ಆಡಿರುವ 293 ಪಂದ್ಯಗಳಲ್ಲಿ ಕೊಹ್ಲಿ 14235 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 18426 ರನ್ಗಳೊಂದಿಗೆ ಮೊದಲ ಸ್ಥಾನ, ಕುಮಾರ್ ಸಂಗಕ್ಕಾರ (14234) 3ನೇ ಸ್ಥಾನ, ರಿಕಿ ಪಾಂಟಿಂಗ್ (13704) 4ನೇ ಸ್ಥಾನ, ಸನತ್ ಜಯಸೂರ್ಯ (13430) ರನ್ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಪಾಲುದಾರಿಕೆಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 99 ಶತಕ ಪಾಲುದಾರಿಕೆಗಳೊಂದಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 82 ಶತಕ ಪಾಲುದಾರಿಕೆಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ 72, ರೋಹಿತ್ ಶರ್ಮಾ 68 ಮತ್ತು ಕುಮಾರ್ ಸಂಗಕ್ಕಾರ 67 ಶತಕ ಪಾಲುದಾರಿಕೆಗಳನ್ನು ಹಂಚಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಪಾಲುದಾರಿಕೆ ಹೊಂದಿರುವವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೂರನೇ ಸ್ಥಾನ ತಲುಪಿದ್ದಾರೆ. ರೋಹಿತ್ ಮತ್ತು ವಿರಾಟ್ 101 ಪಂದ್ಯಗಳಲ್ಲಿ 19 ಶತಕಗಳ ಜೊತೆಯಾಟ ನಡೆಸಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ 176 ಏಕದಿನ ಪಂದ್ಯಗಳಲ್ಲಿ 26 ಶತಕ ಪಾಲುದಾರಿಕೆಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಸಿಡ್ನಿ ಏಕದಿನ ಪಂದ್ಯದಲ್ಲಿ ಮ್ಯಾಥ್ಯೂ ಶಾರ್ಟ್ ಕ್ಯಾಚ್ ಹಿಡಿಯುವ ಮೂಲಕ ವಿರಾಟ್ ಕೊಹ್ಲಿ ವಿಶ್ವ ದಾಖಲೆಯನ್ನು ಮುರಿದರು. ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಶಾರ್ಟ್ ಕ್ಯಾಚ್ ಪಡೆದು ಒಂದು ಎದುರಾಳಿ ತಂಡದ ವಿರುದ್ಧ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ 78 ಕ್ಯಾಚ್‌ಗಳೊಂದಿಗೆ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ದಾಖಲೆಯನ್ನು ಸಹ ಮುರಿದರು.