
2026 ರ ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ವಡೋದರಾದಲ್ಲಿ ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿಗೆ. ಇದಕ್ಕೂ ಮುನ್ನ ಎರಡೂ ತಂಡಗಳ ನಡುವೆ 2024 ರಲ್ಲಿ ಫೈನಲ್ ಪಂದ್ಯ ನಡೆದಿತ್ತು. ಆ ಪಂದ್ಯವನ್ನು ಆರ್‌ಸಿಬಿ ಗೆದ್ದುಕೊಂಡಿತ್ತು.

ಇದೀಗ ಅದೇ ಇತಿಹಾಸವನ್ನು ಪುನರಾವರ್ತಿಸಲು ಆರ್‌ಸಿಬಿ ಎದುರು ನೋಡುತ್ತಿದ್ದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ. ಮಾತ್ರವಲ್ಲದೆ ಡೆಲ್ಲಿ ತಂಡ ಸತತ ನಾಲ್ಕನೇ ಬಾರಿಗೆ ಫೈನಲ್ ಆಡುತ್ತಿದ್ದು, ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ. ಆದರೆ ಆರ್‌ಸಿಬಿ ತನ್ನ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆಯಾದರೂ ಇತಿಹಾಸ ಬದಲಿಸುವ ಸವಾಲು ಸ್ಮೃತಿ ಪಡೆಗಿದೆ.

ವಾಸ್ತವವಾಗಿ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ನೇರವಾಗಿ ಫೈನಲ್ ತಲುಪಿರುವ ತಂಡವು ಇದುವರೆಗೆ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಅಂದರೆ ಇದುವರೆಗೆ ಚಾಂಪಿಯನ್ ಆಗಿರುವ ತಂಡಗಳೆಲ್ಲ ಎಲಿಮಿನೇಟರ್ ಆಡಿ ಬಂದ ತಂಡಗಳಾಗಿವೆ. ಹೀಗಾಗಿ ಈ ಬಾರಿ ನೇರವಾಗಿ ಫೈನಲ್ಗೇರಿರುವ ಆರ್‌ಸಿಬಿ ಇತಿಹಾಸ ಬದಲಿಸಿ ಟ್ರೋಪಿ ಎತ್ತಿ ಹಿಡಿಯಬೇಕಿದೆ.

ಈ ಫೈನಲ್ ಪಂದ್ಯ ನಡೆಯಲಿರುವ ವಡೋದರಾದಲ್ಲಿ ಎರಡು ತಂಡಗಳ ದಾಖಲೆಯ ಬಗ್ಗೆ ಹೇಳುವುದಾದರೆ.. ಆರ್‌ಸಿಬಿ ಇಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ ಎಂಟು ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದೆ. ಇನ್ನು ಡಬ್ಲ್ಯೂಪಿಎಲ್ 2026 ರಲ್ಲಿ ಆರ್‌ಸಿಬಿ ವಡೋದರಾದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದಿದ್ದರೆ, ಎರಡರಲ್ಲಿ ಸೋತಿದೆ. ಇನ್ನು ಡೆಲ್ಲಿ ತಂಡ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ.

ಇನ್ನು ಈ ಫೈನಲ್ ಪಂದ್ಯಕ್ಕೂ ಮೊದಲು ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳ ನಡುವಿನ ಮುಖಾಮುಖಿ ದಾಖಲೆಯನ್ನು ನೋಡಿದರೆ, ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ಮೇಲೆ ಮೇಲುಗೈ ಸಾಧಿಸಿದೆ. ಇದುವರೆಗೆ ಎರಡು ತಂಡಗಳು ಒಂಬತ್ತು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಆರರಲ್ಲಿ ಗೆದ್ದಿದ್ದರೆ, ಆರ್‌ಸಿಬಿ ಉಳಿದ ಪಂದ್ಯಗಳನ್ನು ಗೆದ್ದಕೊಂಡಿದೆ.