
ಕೇರಳದ ಕೊಚ್ಚಿಯಲ್ಲಿ ಅಕ್ಟೋಬರ್ 28 ರಂದು ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಹರಾಜಿನಲ್ಲಿ ಒಟ್ಟು 146 ಆಟಗಾರ್ತಿಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರೂ, ಎಲ್ಲರ ಚಿತ್ತ ನೆಟ್ಟಿರುವುದು ಗರಿಷ್ಠ ₹50 ಲಕ್ಷ ಮೂಲ ಬೆಲೆ ಘೋಷಿಸಿಕೊಂಡಿರುವ ಇಬ್ಬರೇ ಇಬ್ಬರು ವಿದೇಶಿ ಆಟಗಾರ್ತಿಯರ ಮೇಲೆ. (PC: Gettyimages)
ಅಂದರೆ ಈ ಬಾರಿ 146 ಆಟಗಾರ್ತಿಯರಲ್ಲಿ ಕೇವಲ ಇಬ್ಬರು ಮಾತ್ರ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನುಳಿದ ಆಟಗಾರ್ತಿಯರು 40 ಲಕ್ಷ ರೂ, 30 ಲಕ್ಷ ರೂ. ಹಾಗೂ 10 ಲಕ್ಷ ರೂ.ಬೇಸ್ ಪ್ರೈಸ್ಗಳೊಂದಿಗೆ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅದರಂತೆ ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಗರಿಷ್ಠ ಮೂಲ ಬೆಲೆಯ ಇಬ್ಬರು ಆಟಗಾರ್ತಿಯರ ವಿವರ ಈ ಕೆಳಗಿನಂತಿದೆ... (PC: WPL)
ಸೋಫಿ ಮೊಲಿನ್ಯೂ: ಆಸ್ಟ್ರೇಲಿಯಾದ ಎಡಗೈ ಸ್ಪಿನ್ ಆಲ್ ರೌಂಡರ್ ಆಗಿರುವ ಸೋಫಿ ಮೊಲಿನ್ಯೂ, ಟಿ20 ಕ್ರಿಕೆಟ್‌ನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರು. ಕರಾರುವಾಕ್ ಲೈನ್ ಅಂಡ್ ಲೆಂಗ್ತ್ ಬೌಲಿಂಗ್ ಹಾಗೂ ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸುವ ಇವರ ಚಾಣಾಕ್ಷತನ ತಂಡಗಳಿಗೆ ದೊಡ್ಡ ಬಲ ತಂದುಕೊಡುತ್ತದೆ. ಇದರೊಂದಿಗೆ ಕೆಳಕ್ರಮಾಂಕದಲ್ಲಿ ಬಂದು ಬಿರುಸಿನ ಬ್ಯಾಟಿಂಗ್ ನಡೆಸುವ ಆಲ್-ರೌಂಡ್ ಸಾಮರ್ಥ್ಯವೂ ಇವರಿಗಿದೆ. ಕಳೆದ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡಿದ್ದ ಮೊಲಿನ್ಯೂ, ಈ ಬಾರಿ ₹50 ಲಕ್ಷದ ಗರಿಷ್ಠ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. (PC: Gettyimages)
ಸೋಫಿಯಾ ಡಂಕ್ಲಿ: ಇಂಗ್ಲೆಂಡ್ ತಂಡದ ಸ್ಫೋಟಕ ಬಲಗೈ ಆರಂಭಿಕ ಬ್ಯಾಟರ್ ಆಗಿರುವ ಸೋಫಿಯಾ ಡಂಕ್ಲಿ, ತಮ್ಮ ಬಿರುಸಿನ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿ. ಪವರ್‌ಪ್ಲೇ ಓವರ್‌ಗಳನ್ನು ಸಮರ್ಥವಾಗಿ ಬಳಸಿಕೊಂಡು ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುವ ಇವರು, ಮೊದಲ ಎಸೆತದಿಂದಲೇ ಬೌಂಡರಿ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಹಿಂದೆ ಗುಜರಾತ್ ಜೈಂಟ್ಸ್ ತಂಡದ ಪರ ಕಣಕ್ಕಿಳಿದಿದ್ದ ಡಂಕ್ಲಿ, ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅವರನ್ನು ಫ್ರಾಂಚೈಸಿಯು ಕೈಬಿಟ್ಟಿತ್ತು. ಆದರೆ, ಈ ಬಾರಿ ಅವರು ₹50 ಲಕ್ಷದ ಗರಿಷ್ಠ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. (PC: Gettyimages)
ಇನ್ನು 40 ಲಕ್ಷ ರೂ. ಮೂಲ ಬೆಲೆಯೊಂದಿಗೆ ಒಟ್ಟು ನಾಲ್ವರು ಸ್ಟಾರ್ ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ.ಇದರಲ್ಲಿ ಭಾರತದ ಸ್ಫೋಟಕ ಬ್ಯಾಟರ್ ಕಿರಣ್ ನವಗಿರೆ ಮತ್ತು ದೇಶಿ ಕ್ರಿಕೆಟ್‌ನ ಉದಯೋನ್ಮುಖ ತಾರೆ ಜಿ. ಕಮಲಿನಿ ಭಾರತೀಯರ ಪಟ್ಟಿಯಲ್ಲಿದ್ದರೆ, ವಿದೇಶಿ ಕೋಟಾದಲ್ಲಿ ಆಸ್ಟ್ರೇಲಿಯಾದ ಅನುಭವಿ ಎಡಗೈ ಸ್ಪಿನ್ ಆಲ್-ರೌಂಡರ್ ಜೆಸ್ ಜೊನಾಸೆನ್ ಹಾಗೂ ಬಲಗೈ ವೇಗಿ ಹೀದರ್ ಗ್ರಹಾಂ ಕಾಣಿಸಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ, ಶ್ರೀಲಂಕಾದ ತಂಡದ ನಾಯಕಿ ಚಾಮರಿ ಅಥಾಪತ್ತು, ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಹಾಗೂ ಭಾರತದ ಹಿರಿಯ ಆಲ್-ರೌಂಡರ್ ಸ್ನೇಹ ರಾಣಾ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. (PC: Gettyimages)