Updated on:Jun 11, 2023 | 5:34 PM
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಬಗ್ಗು ಬಡಿದು ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಟೀಮ್ ಇಂಡಿಯಾ ಕನಸು ನುಚ್ಚು ನೂರಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಫೈನಲ್ನಲ್ಲಿ ಸೋಲನುಭವಿಸಿತ್ತು.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ (121) ಹಾಗೂ ಟ್ರಾವಿಸ್ ಹೆಡ್ (163) ಅವರ ಶತಕದ ನೆರವಿನಿಂದ ಪ್ರಥಮ ಇನಿಂಗ್ಸ್ನಲ್ಲಿ 469 ರನ್ ಕಲೆಹಾಕಿತ್ತು.
ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್ಗಳು ವಿಫಲರಾಗಿದ್ದರು. ಇದಾಗ್ಯೂ ಅಜಿಂಕ್ಯ ರಹಾನೆ (89) ಹಾಗೂ ಶಾರ್ದೂಲ್ ಠಾಕೂರ್ (51) ಅವರ ಅರ್ಧಶತಕ ಬಾರಿಸಿ ಮಿಂಚಿದ್ದರು. ಆದರೆ 296 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 173 ರನ್ಗಳ ಹಿನ್ನಡೆ ಅನುಭವಿಸಿತು.
173 ರನ್ಗಳ ಮುನ್ನಡೆ ಪಡೆದ ಆಸ್ಟ್ರೇಲಿಯಾ ತಂಡದ ಪರ ದ್ವಿತೀಯ ಇನಿಂಗ್ಸ್ನಲ್ಲಿ ಅಲೆಕ್ಸ್ ಕ್ಯಾರಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ 8 ವಿಕೆಟ್ ನಷ್ಟಕ್ಕೆ 270 ರನ್ಗಳಿಸಿದ್ದ ವೇಳೆ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ನ್ನು ಡಿಕ್ಲೇರ್ ಮಾಡಿಕೊಂಡಿತು.
444 ರನ್ಗಳ ಗುರಿಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 4ನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿತು. ಅಲ್ಲದೆ ಕೊನೆಯ ದಿನದಾಟದಲ್ಲಿ 280 ರನ್ಗಳ ಗುರಿ ಪಡೆಯಿತು.
ಆದರೆ 5ನೇ ದಿನದಾಟದ ಆರಂಭದಲ್ಲೇ ವಿರಾಟ್ ಕೊಹ್ಲಿ (49) ಹಾಗೂ ರವೀಂದ್ರ ಜಡೇಜಾ (0) ಸ್ಕಾಟ್ ಬೋಲ್ಯಾಂಡ್ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಭರವಸೆ ಮೂಡಿಸಿದ್ದ ಅಜಿಂಕ್ಯ ರಹಾನೆ (46) ಅನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದರು. ಇನ್ನು ಶಾರ್ದೂಲ್ ಠಾಕೂರ್ (0) ಲಿಯಾನ್ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಭಾರತದ ಸೋಲು ಖಚಿತವಾಯಿತು.
ಇನ್ನು ಉಮೇಶ್ ಯಾದವ್ (1) ಹಾಗೂ ಶ್ರೀಕರ್ ಭರತ್ (23) ಲಿಯಾನ್ಗೆ ವಿಕೆಟ್ ಒಪ್ಪಿಸಿದರು. ಹಾಗೆಯೇ ಕೊನೆಯ ವಿಕೆಟ್ ಆಗಿ ಮೊಹಮ್ಮದ್ ಸಿರಾಜ್ (1) ಔಟಾಗುವುದರೊಂದಿಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಅನ್ನು 234 ರನ್ಗಳಿಗೆ ಅಂತ್ಯಗೊಳಿಸಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡವು 209 ರನ್ಗಳ ಭರ್ಜರಿ ಜಯ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Published On - 5:07 pm, Sun, 11 June 23