- Kannada News Photo gallery Cricket photos Kannada News | WTC Final 2023: Josh Hazlewood ruled out of WTC Final
WTC Final 2023: ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರ ಔಟ್..!
WTC Final 2023: ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್.
Updated on: Jun 04, 2023 | 5:51 PM

WTC Final 2023: ಜನವರಿ 7 ರಿಂದ ಶುರುವಾಗಲಿರುವ ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಫೈನಲ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಹೌದು, ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ.

ಕಳೆದ ಕೆಲ ತಿಂಗಳಿಂದ ಪಾದದ ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಜೋಶ್ ಹ್ಯಾಝಲ್ವುಡ್ ಈ ಬಾರಿಯ ಐಪಿಎಲ್ನಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದರು. ಇದಾಗ್ಯೂ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವಾಡಲಿದ್ದಾರೆ ಎನ್ನಲಾಗಿತ್ತು.

ಅದರಂತೆ ಫೈನಲ್ ಪಂದ್ಯಕ್ಕೆ ಹ್ಯಾಝಲ್ವುಡ್ ಕಠಿಣ ಅಭ್ಯಾಸವನ್ನೂ ಕೂಡ ಆರಂಭಿಸಿದ್ದರು. ಇದೀಗ ಫಿಟ್ ಆಗಿದ್ದರೂ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಅವರಿಗೆ ವಿಶ್ರಾಂತಿ ಸೂಚಿಸಿದೆ. ಇದಕ್ಕೆ ಮುಖ್ಯ ಕಾರಣ ಮುಂಬರುವ ಆ್ಯಶಸ್ ಸರಣಿ.

ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಟೆಸ್ಟ್ ಸರಣಿಗೆ ಜೋಶ್ ಹ್ಯಾಝಲ್ವುಡ್ ಅತ್ಯವಶ್ಯಕ. ಇದೀಗ ಅವರು ಫಿಟ್ನೆಸ್ ಸಾಧಿಸುತ್ತಾ ಬಂದಿದ್ದಾರೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡ ಆ್ಯಶಸ್ ಸರಣಿ ಆಡಬೇಕಿದೆ.

ಮುಂಬರುವ ಸರಣಿಯನ್ನು ಗಮನದಲ್ಲಿರಿಸಿ ಎಚ್ಚರಿಕೆಯ ಸಲುವಾಗಿ ಜೋಶ್ ಹ್ಯಾಝಲ್ವುಡ್ ಅವರನ್ನು ಫೈನಲ್ ಪಂದ್ಯದಿಂದ ಹೊರಗಿಡಲಾಗಿದೆ ಎಂದು ಆಸ್ಟ್ರೇಲಿಯಾ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ತಿಳಿಸಿದ್ದಾರೆ.

ಇನ್ನು ಜೋಶ್ ಹ್ಯಾಝಲ್ವುಡ್ ಸ್ಥಾನಕ್ಕೆ 33 ವರ್ಷದ ವೇಗದ ಬೌಲರ್ ಮೈಕೆಲ್ ನೆಸರ್ ಅವರನ್ನು ಆಯ್ಕೆ ಮಾಡಲಾಗಿದೆ. 2021-22ರ ಆ್ಯಶಸ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ನೆಸರ್, ಆ ಬಳಿಕ ಆಡಿದ್ದು ಕೇವಲ ಒಂದು ಟೆಸ್ಟ್ ಪಂದ್ಯ ಮಾತ್ರ. ಇದೀಗ ಮತ್ತೆ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಆಸ್ಟ್ರೇಲಿಯಾ ಪರ 59 ಟೆಸ್ಟ್ ಪಂದ್ಯಗಳನ್ನಾಡಿರುವ ಜೋಶ್ ಹ್ಯಾಝಲ್ವುಡ್ ಒಟ್ಟು 222 ವಿಕೆಟ್ ಕಬಳಿಸಿದ್ದಾರೆ. ಇದೀಗ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಿಂದ ಪ್ರಮುಖ ವೇಗಿ ಹೊರಗುಳಿಯುತ್ತಿರುವುದು ಆಸೀಸ್ ಬಳಗಕ್ಕೆ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ.

ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್ (ಉಪ ನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಮೈಕೆಲ್ ನೆಸರ್.



















