RCB ವೇಗಿ ಯಶ್ ದಯಾಳ್ಗೆ ನಿಷೇಧ..!
Yash Dayal: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ವೇಗಿ ಯಶ್ ದಯಾಳ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಲೈಂಗಿಕ ದೌರ್ಜನ್ಯದ ಆರೋಪದಡಿಯಲ್ಲಿ ಉತ್ತರ ಪ್ರದೇಶದ ಗಾಝಿಯಾಬಾದ್ ಠಾಣೆಯಲ್ಲಿ ದಯಾಳ್ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತ ಎಫ್ಐಆರ್ ದಾಖಲಾಗಿರುವ ಕಾರಣ ಯಶ್ ದಯಾಳ್ ಅವರನ್ನು ಬಂಧಿಸುವ ಸಾಧ್ಯತೆಯಿದೆ.
Updated on:Aug 10, 2025 | 11:54 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಯಶ್ ದಯಾಳ್ ಅವರನ್ನು ಉತ್ತರ ಪ್ರದೇಶ ಟಿ20 ಲೀಗ್ನಿಂದ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಯಶ್ ದಯಾಳ್ ಅವರನ್ನು UPT20 2025 ಲೀಗ್ನಿಂದ ಕೈ ಬಿಡಲಾಗಿದ್ದು, ಹೀಗಾಗಿ ಮುಂಬರುವ ಟೂರ್ನಿಯಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ.

ಯಶ್ ದಯಾಳ್ ಮೇಲೆ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪವಿದೆ. ಈ ಪ್ರಕರಣ ಸಂಬಂಧ ಬಂಧನದ ಭೀತಿಯನ್ನು ಸಹ ಎದುರಿಸುತ್ತಿದ್ದಾರೆ. ಹೀಗಾಗಿ ಯುಪಿ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಮುಂಬರುವ ಉತ್ತರ ಪ್ರದೇಶ ಟಿ20 ಲೀಗ್ನಲ್ಲಿ ಕಣಕ್ಕಿಳಿಯದಂತೆ ಯಶ್ ದಯಾಳ್ಗೆ ಸೂಚಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಬಾರಿಯ ಉತ್ತರ ಪ್ರದೇಶ ಟಿ20 ಲೀಗ್ನಲ್ಲಿ ಯಶ್ ದಯಾಳ್ ಗೋರಖ್‌ಪುರ ಲಯನ್ಸ್ ಪರ ಕಣಕ್ಕಿಳಿಯಬೇಕಿತ್ತು. ಕಳೆದ ಬಾರಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಆರ್ಸಿಬಿ ವೇಗಿಯನ್ನು ಗೋರಖ್ಪುರ್ ಲಯನ್ಸ್ ಫ್ರಾಂಚೈಸಿಯು 7 ಲಕ್ಷ ರೂ. ನೀಡಿ ಖರೀದಿಸಿದ್ದರು. ಆದರೀಗ ದಯಾಳ್ ಅವರನ್ನು ಕೈ ಬಿಡುವಂತೆ ಗೋರಖ್ಪುರ್ ಲಯನ್ಸ್ ಫ್ರಾಂಚೈಸಿಗೆ ಯುಪಿಸಿಎ ತಿಳಿಸಿದೆ.

ಇದಕ್ಕೂ ಮುನ್ನ ಯಶ್ ದಯಾಳ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಜೋಶ್ ಹೇಝಲ್ವುಡ್ ಜೊತೆ ದಾಳಿ ಸಂಘಟಿಸಿದ್ದ ಎಡಗೈ ವೇಗಿ ಒಟ್ಟು 13 ವಿಕೆಟ್ಗಳನ್ನು ಸಹ ಕಬಳಿಸಿದ್ದರು. ಈ ಮೂಲಕ ಆರ್ಸಿಬಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಈ ಗೆಲುವಿನ ಸಂಭ್ರಮದ ಬೆನ್ನಲ್ಲೇ ಯಶ್ ದಯಾಳ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಅಲ್ಲದೆ ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದೆ. ಈ ಸಂಬಂಧ ಬಂಧನವನ್ನು ತಡೆ ಹಿಡಿಯುವಂತೆ ಯಶ್ ದಯಾಳ್ ಅವರಿಗೆ ರಾಜಸ್ಥಾನ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಅವರ ಬಂಧನ ಮತ್ತು ಪೊಲೀಸ್ ಕ್ರಮಕ್ಕೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದೆ. ಹೀಗಾಗಿ ಯುಪಿ ಟಿ20 ಲೀಗ್ನಲ್ಲಿ ಕಣಕ್ಕಿಳಿಯದಂತೆ ಯಶ್ ದಯಾಳ್ ಅವರ ಮೇಲೆ ಯುಪಿಸಿಎ ನಿಷೇಧ ಹೇರಿದೆ.
Published On - 11:53 am, Sun, 10 August 25
