23ನೇ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
India vs West Indies, 2nd Test: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಭಾರತ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 318 ರನ್ ಕಲೆಹಾಕಿದೆ.
Updated on: Oct 11, 2025 | 7:36 AM

ಭಾರತ ತಂಡದ ಯಂಗ್ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಸಹ ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರು 23ನೇ ವಯಸ್ಸಿನಲ್ಲಿ ಬರೆದ ವರ್ಲ್ಡ್ ರೆಕಾರ್ಡ್ ಅನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ 253 ಎಸೆತಗಳಲ್ಲಿ 173* ರನ್ ಬಾರಿಸಿದ್ದಾರೆ. ಈ ಭರ್ಜರಿ ಬ್ಯಾಟಿಂಗ್‌ನೊಂದಿಗೆ ಜೈಸ್ವಾಲ್ ವಿಶೇಷ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 23 ವರ್ಷದೊಳಗೆ ಅತೀ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಆರಂಭಿಕ ದಾಂಡಿಗ ಎಂಬ ವಿಶ್ವ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್ ಹೆಸರಿನಲ್ಲಿತ್ತು.

ಗ್ರೇಮ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 23ನೇ ವಯಸ್ಸಿನೊಳಗೆ ಆರಂಭಿಕನಾಗಿ ಕಣಕ್ಕಿಳಿದು 7 ಶತಕ ಸಿಡಿಸಿದ್ದರು. ಈ ಏಳು ಶತಕ ಬಾರಿಸಲು ಬರೋಬ್ಬರಿ 50 ಇನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಇದೀಗ ಈ ಭರ್ಜರಿ ದಾಖಲೆಯನ್ನು ಜೈಸ್ವಾಲ್ ಮುರಿದಿದ್ದಾರೆ.

ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ 23 ವರ್ಷದ ಯಶಸ್ವಿ ಜೈಸ್ವಾಲ್ ಈಗಾಗಲೇ 7 ಟೆಸ್ಟ್ ಶತಕ ಬಾರಿಸಿದ್ದಾರೆ. ಅದು ಸಹ ಕೇವಲ 48 ಇನಿಂಗ್ಸ್ ಗಳಲ್ಲಿ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಆರಂಭಿಕನಾಗಿ ಕಣಕ್ಕಿಳಿದು ಅತೀ ಕಡಿಮೆ ಇನಿಂಗ್ಸ್ ಗಳಲ್ಲಿ 7 ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
