ಯಶಸ್ವಿ ಜೈಸ್ವಾಲ್ ಗಾಯಾಳು: ನಿರ್ಣಾಯಕ ಪಂದ್ಯಕ್ಕೆ ಅಲಭ್ಯ
Ranji Trophy 2025: ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯವು ನಾಳೆಯಿಂದ (ಫೆ.17) ಶುರುವಾಗಲಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಕೇರಳ ಮತ್ತು ಗುಜರಾತ್ ತಂಡಗಳು ಮುಖಾಮುಖಿಯಾದರೆ, ನಾಗ್ಪುರದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಮುಂಬೈ ಮತ್ತು ವಿದರ್ಭ ತಂಡಗಳು ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೆ ಮುಂಬೈ ತಂಡದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ಅಲಭ್ಯರಾಗಿದ್ದಾರೆ.
Updated on: Feb 16, 2025 | 10:58 AM

ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್ ಮುಂಬೈ ಪರ ರಣಜಿ ಪಂದ್ಯವಾಡಲಿದ್ದಾರೆ ಎನ್ನಲಾಗಿತ್ತು. ಆದರೀಗ ನಿರ್ಣಾಯಕ ಪಂದ್ಯದಿಂದ ಹೊರಗುಳಿಯಲು ಜೈಸ್ವಾಲ್ ನಿರ್ಧರಿಸಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಯಶಸ್ವಿ ಜೈಸ್ವಾಲ್ ಗಾಯಗೊಂಡಿರುವುದು. ಎಡಗಾಲಿನ ಪಾದದ ನೋವಿನಿಂದ ಬಳಲುತ್ತಿರುವ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ವಿದರ್ಭ ವಿರುದ್ಧದ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಿಂದ ಯಶಸ್ವಿ ಜೈಸ್ವಾಲ್ ಹಿಂದೆ ಸರಿದಿದ್ದಾರೆ.

ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿನ ಬದಲಾವಣೆಯಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದಾರೆ. ಅಲ್ಲದೆ ಅವರ ಬದಲಿಗೆ 15 ಸದಸ್ಯರ ಬಳಗಕ್ಕೆ ವರುಣ್ ಚಕ್ರವರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

ಇದಾಗ್ಯೂ ಯಶಸ್ವಿ ಜೈಸ್ವಾಲ್ ಅವರನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಮೀಸಲು ಆಟಗಾರರ ಪಟ್ಟಿಯಲ್ಲಿರಿಸಲಾಗಿದೆ. ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಅವರನ್ನು ಪ್ರಯಾಣೇತರ ಬದಲಿ ಆಟಗಾರರಾಗಿ ಆಯ್ಕೆ ಮಾಡಲಾಗಿದ್ದು, ಭಾರತ ತಂಡದಿಂದ ಯಾರಾದರೂ ಯಾರಾದರೂ ಗಾಯಗೊಂಡರೆ, ಬದಲಿ ಆಟಗಾರರಾಗಿ ಇವರು ದುಬೈಗೆ ಪ್ರಯಾಣಿಸಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
























