IPL 2024: ಗಿಲ್, ಕೊಹ್ಲಿ ಅಲ್ಲ: ಆರೆಂಜ್ ಕ್ಯಾಪ್ ಗೆಲ್ಲೋರು ಯಾರೆಂದು ತಿಳಿಸಿದ ಚಹಲ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 17ನೇ ಆವೃತ್ತಿ ಮಾರ್ಚ್ 22 ರಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ IPLನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಐಪಿಎಲ್ ಸೀಸನ್ 17 ಗೆ ಚಾಲನೆ ದೊರೆಯಲಿದೆ.
Updated on: Mar 03, 2024 | 2:22 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಕೆಲ ತಂಡಗಳು ಅಭ್ಯಾಸವನ್ನು ಸಹ ಆರಂಭಿಸಿದೆ. ಇದರ ನಡುವೆ ಈ ಬಾರಿ ಕಪ್ ಗೆಲ್ಲುವವರು ಯಾರು? ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳೋರು ಯಾರು ಎಂಬ ಚರ್ಚೆಗಳು ಕೂಡ ಶುರುವಾಗಿದೆ. ಈ ಚರ್ಚೆಗಳ ನಡುವೆ ಈ ಸಲ ಆರೆಂಜ್ ಕ್ಯಾಪ್ ಯಾರ ಪಾಲಾಗಲಿದೆ ಎಂಬುದನ್ನು ತಿಳಿಸಿದ್ದಾರೆ ಯುಜ್ವೇಂದ್ರ ಚಹಲ್ (Yuzvendra Chahal).

ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿರುವ ಯುಜ್ವೇಂದ್ರ ಚಹಲ್ ಈ ಬಾರಿ ಐಪಿಎಲ್ನಲ್ಲಿ ಅತ್ಯಧಿಕ ರನ್ ಕಲೆಹಾಕುವ ಬ್ಯಾಟರ್ ಯಾರೆಂಬುದನ್ನು ತಿಳಿಸಿದ್ದಾರೆ. ಈ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇಲ್ಲ ಎಂಬುದು ವಿಶೇಷ.

ಚಹಲ್ ಪ್ರಕಾರ, ಐಪಿಎಲ್ 2024 ರಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ಗೆಲ್ಲಲಿದ್ದಾರಂತೆ. ಐಪಿಎಲ್ 2022 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬಟ್ಲರ್ 17 ಪಂದ್ಯಗಳಿಂದ 863 ರನ್ ಕಲೆಹಾಕಿದ್ದರು. ಹೀಗಾಗಿ ಈ ಬಾರಿ ಕೂಡ ಆರೆಂಜ್ ಕ್ಯಾಪ್ ಜೋಸ್ ಬಟ್ಲರ್ ಪಾಲಾಗಲಿದೆ ಎಂದು ಚಹಲ್ ಭವಿಷ್ಯ ನುಡಿದಿದ್ದಾರೆ.

ಇನ್ನು ಜೋಸ್ ಬಟ್ಲರ್ಗೆ ಯಶಸ್ವಿ ಜೈಸ್ವಾಲ್ ಕಡೆಯಿಂದ ಪೈಪೋಟಿ ಎದುರಾಗಲಿದೆ. ಕಳೆದ ಸೀಸನ್ನಲ್ಲಿ 14 ಪಂದ್ಯಗಳಿಂದ 624 ರನ್ ಕಲೆಹಾಕಿದ ಜೈಸ್ವಾಲ್ ಈ ಬಾರಿ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಲಿದ್ದಾರೆ. ಅಲ್ಲದೆ ಅವರು ಕೂಡ ಆರೆಂಜ್ ಕ್ಯಾಪ್ ಗೆಲ್ಲುವ ಪ್ರತಿಸ್ಪರ್ಧಿಯಾಗಲಿದ್ದಾರೆ ಎಂದು ಚಹಲ್ ಹೇಳಿದ್ದಾರೆ.

ಅಂದರೆ ಯುಜ್ವೇಂದ್ರ ಚಹಲ್ ಪ್ರಕಾರ, ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ಗಳಾದ ಜೋಸ್ ಬಟ್ಲರ್ ಅಥವಾ ಯಶಸ್ವಿ ಜೈಸ್ವಾಲ್ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವುದು ಖಚಿತ. ಅಲ್ಲದೆ ಈ ಬಾರಿ ನಾನು ಅತೀ ಹೆಚ್ಚು ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೆಲ್ಲಲಿದ್ದೇನೆ ಎಂದು ಚಹಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಕಬಳಿಸಿರುವ ದಾಖಲೆ ಹೊಂದಿರುವ ಯುಜ್ವೇಂದ್ರ ಚಹಲ್ ಈ ಬಾರಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ. ಅಂದರೆ 187 ವಿಕೆಟ್ಗಳನ್ನು ಹೊಂದಿರುವ ಚಹಲ್ 13 ವಿಕೆಟ್ ಕಬಳಿಸಿದರೆ ಐಪಿಎಲ್ನಲ್ಲಿ 200 ವಿಕೆಟ್ ಪೂರೈಸಿದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಯುಜ್ವೇಂದ್ರ ಚಹಲ್ ಕಡೆಯಿಂದ ಭರ್ಜರಿ ದಾಖಲೆಯನ್ನು ನಿರೀಕ್ಷಿಸಬಹುದು.



















