- Kannada News Photo gallery Davangere Harmony: Hindus and Muslims Celebrate Ganeshotsava and Eid Milad Together in Harihar, Muslims support RSS
ದಾವಣಗೆರೆ: ಸೌಹಾರ್ದ ಸಂದೇಶ ಸಾರಿದ ಹಿಂದೂ ಮುಸ್ಲಿಂ ಗಣಪ! ಉಭಯ ಕೋಮಿನವರಿಂದ ಗಣೇಶೋತ್ಸವ, ಈದ್ ಆಚರಣೆ
ದಾವಣಗೆರೆ, ಸೆಪ್ಟೆಂಬರ್ 5: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಕೂಡ ಕೋಮು ಗಲಭೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಉಭಯ ಕೋಮುಗಳ ಹಬ್ಬಗಳು ಒಟ್ಟೊಟ್ಟಿಗೆ ಬಂದರೆ ಇದು ಹೆಚ್ಚಾಗುತ್ತದೆ. ಆದರೆ, ದಾವಣಗೆರೆಯಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಜತೆ ಸೇರಿ ಎರಡೂ ಹಬ್ಬಗಳನ್ನು ಒಟ್ಟಿಗೆ ಆಚರಿಸುವುದರ ಜೊತೆಗೆ ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ರವಾನೆ ಮಾಡಿದ್ದಾರೆ!
Updated on:Sep 05, 2025 | 9:53 AM

ಇತ್ತ ಮುಸ್ಲಿಂ ಸಮುದಾಯದವರು ಕೇಸರಿ ಬಣ್ಣದ ಬಟ್ಟೆಯಿಂದ ಏರಿಯಾವನ್ನು ಅಲಂಕಾರ ಮಾಡಿದ್ದರೆ, ಅತ್ತ ಹಿಂದೂಗಳು ಹಸಿರು ಬಣ್ಣ ಬಟ್ಟೆಯಿಂದ ಇಡೀ ಗಲ್ಲಿಯನ್ನು ಸಿಂಗಾರ ಮಾಡಿದ ದೃಶ್ಯ ಕಂಡು ಬಂದಿದ್ದು ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಜೆಸಿ ಬಡಾವಣೆಯಲ್ಲಿ. ಈ ಏರಿಯಾದಲ್ಲಿ ಎರಡು ಕೋಮಿನ ಜನರು ವಾಸ ಮಾಡುತ್ತಿದ್ದು, ಗಣೇಶ-ಈದ್ ಮಿಲಾದ್ ಹಬ್ಬವನ್ನು ಜೊತೆಯಾಗಿ ಆಚರಿಸುತ್ತಿದ್ದಾರೆ. ‘‘ಶ್ರೀ ಕಿರಿಯ ಮಿತ್ರ ಸಂಘ’’ದಿಂದ 45 ವರ್ಷದಿಂದ ಆಚರಿಸಿಕೊಂಡು ಬರುತ್ತಿರುವ ಗಣೇಶೋತ್ಸವದಲ್ಲಿ ಮುಸ್ಲಿಮರೂ ಭಾಗಿಯಾಗುತ್ತಿದ್ದಾರೆ.

ಈ ವರ್ಷ ಈದ್ ಮಿಲಾದ್ ಹಬ್ಬ ಕೂಡ ಗಣೇಶ ಹಬ್ಬದ ಜೊತೆಯಾಗಿ ಬಂದಿರುವ ಕಾರಣ ಮುಸ್ಲಿಮರು, ಹಿಂದೂಗಳು ಸೇರಿಕೊಂಡು ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಕಿರಿಯ ಮಿತ್ರ ಸಂಘದಿಂದ 21 ದಿನಗಳ ಬಳಿಕ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಯುತ್ತದೆ. ಇದರಲ್ಲಿ ಜೆಸಿ ಬಡಾವಣೆಯ ಮುಸ್ಲಿಮರು ಮುಂಚೂಣಿಯಲ್ಲಿ ಇರುತ್ತಾರೆ.

ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಹಿಂದೂಗಳು ಭಾಗಿಯಾಗಿ ಹಣ್ಣು, ಹಂಪಲು ಜ್ಯೂಸ್, ನೀರು ಹಂಚಿ ಹರ್ಷ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಅಲ್ಲದೆ ಕೇಸರಿ ಹಸಿರು ಬಾವುಟಗಳನ್ನು ಜೊತೆ ಕಟ್ಟಿ ಇಲ್ಲಿ ಧರ್ಮಗಳ ನಡುವೆ ಕಿಡಿಗೇಡಿಗಳಿಗೆ ಇಲ್ಲಿ ಜಾಗ ಇಲ್ಲ, ನಾವೆಲ್ಲರೂ ಒಂದಾಗಿದ್ದೇವೆ ಎಂದು ಉತ್ತಮ ಸಂದೇಶ ರವಾನಿಸಿದ್ದಾರೆ.

ಹಿಂದೂ-ಮುಸ್ಲಿಮರು ಅಕ್ಕಪಕ್ಕದ ಮನೆಗಳಲ್ಲಿ ಸಹೋದರರಂತೆ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಯಾರೋಬ್ಬರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ಪರಸ್ಪರ ರಕ್ಷಣೆಗೆ ಧಾವಿಸಿ ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಹಿಂದೂಗಳು ಕೂಡ ಮುಸ್ಲಿಮರಿಗೆ ಆಸರೆ ಆಗ್ತಿರುವುದು ವಿಶೇಷ. ಕಳೆದ 45 ವರ್ಷಗಳಿಂದ ಗಣಪತಿ ಹಬ್ಬ ಆಚರಣೆ ಮಾಡುತ್ತಾ ಬರಲಾಗುತ್ತಿದೆ.

ಆರ್ಎಸ್ಎಸ್ ಮೆರವಣಿಗೆ ಹೋದಾಗ ಮುಸ್ಲಿಂ ಸಮುದಾಯದವರು ಹೂವು ಹಾಕಿ, ಹಣ್ಣು ನೀಡಿ, ಜ್ಯೂಸ್ ಹಂಚುತ್ತಾರೆ. ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಹಿಂದೂಗಳು ಜ್ಯೂಸ್, ಹಣ್ಣು ಹಂಚುತ್ತಾರೆ. ಗಣೇಶ ವಿಸರ್ಜನೆಯಲ್ಲಿ ಎರಡು ಕೋಮಿನವರು ಭಾಗಿಯಾಗುತ್ತಾರೆ, ಅಕ್ಕಪಕ್ಕದ ಮನೆಯಲ್ಲಿ ಸಹೋದರರಂತೆ ಇದ್ದೇವೆ. ಇಲ್ಲಿ ಕೋಮುಗಲಭೆ ಈಗಲೂ ನಡೆಯಲ್ಲ, ಮುಂದೆಯೂ ನಡೆಯಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published On - 9:42 am, Fri, 5 September 25



