ಕೋಟೆನಾಡು ಚಿತ್ರದುರ್ಗದ ಅಖಾಡದಲ್ಲಿ ಧೂಳೆಬ್ಬಿಸಿದ ದೇಸಿ ಕುಸ್ತಿಪಟುಗಳು; ತೊಡೆತಟ್ಟಿದ ಮಹಿಳಾ ಮಣಿಯರು
ಆಧುನಿಕ ಕ್ರೀಡೆಗಳ ಎದುರು ಬಹುತೇಕ ದೇಸಿ ಗ್ರಾಮೀಣ ಕ್ರೀಡೆಗಳು ಕಳೆಗುಂದಿವೆ. ಕುಸ್ತಿ ಎಂದರೆ ಮಾರು ದೂರ ಹೋಗುವ ಮಂದಿಯೇ ಹೆಚ್ಚಾಗಿದೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ದಸರಾ ಸಂದರ್ಭದಲ್ಲಿ ಎಂದಿನಂತೆ ಕುಸ್ತಿ ಪಂದ್ಯಾವಳಿ ನಡೆದಿದೆ. ವಿಶೇಷವೆಂದರೆ ಪುರುಷರಿಗೆ ಮಾತ್ರವಲ್ಲದೆ ಮಹಿಳಾ ಮಣಿಯರಿಗೂ ಈ ಸಲ ಕುಸ್ತಿ ಏರ್ಪಡಿಸಲಾಗಿತ್ತು. ಜಗಜಟ್ಟಿಗಳ ಕಾಳಗದ ಒಂದು ಝಲಕ್ ಇಲ್ಲಿದೆ ನೋಡಿ.
ಜಯದೇವ ಅಖಾಡದಲ್ಲಿ ಜಗಜಟ್ಟಿಗಳ ದೊಡ್ಡ ಕಾಳಗ. ತೊಡೆತಟ್ಟಿ ಧೂಳೆಬ್ಬಿಸಿದ ದೇಸಿ ಕುಸ್ತಿಪಟುಗಳು. ನಾವು ಯಾರಿಗೂ ಕಮ್ಮಿ ಇಲ್ಲ ಎಂದು ತೊಡೆತಟ್ಟಿದ ಮಹಿಳಾಮಣಿಯರು. ಕುಸ್ತಿ ನೋಡಲು ಸೇರಿದ ದೇಸಿ ಕ್ರೀಡಾಭಿಮಾನಿಗಳು.
ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದ ಮುರುಘಾಮಠದ ಆವರಣದಲ್ಲಿ.
ದಸರಾ ಸಂದರ್ಭದಲ್ಲಿ ಮುರುಘಾಮಠ ಆಯೋಜಿಸುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ ನಾಡಿನ ವಿವಿದೆಡೆಯಿಂದ ಕುಸ್ತಿಪಟುಗಳು ಆಗಮಿಸಿದ್ದರು.
70ಕ್ಕೂ ಹೆಚ್ಚು ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಭಾಗಿ ಆಗಿದ್ದರು. ತೊಡೆತಟ್ಟಿ ಅಖಾಡದಲ್ಲಿ ದೂಳೆಬ್ಬಿಸಿದರು. ಅಂತೆಯೇ ಶಿವಮೊಗ್ಗ, ದಾವಣಗೆರೆ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಯುವತಿಯರು ಕುಸ್ತಿ ಪಂದ್ಯಾವಳಿಯಲ್ಲಿ ಭಾಗಿ ಆಗಿದ್ದರು.
ಈ ವೇಳೆ ಮುರುಘಾಮಠದ ಆಡಳಿತ ಸಮಿತಿ ಸದಸ್ಯ ಬಸವಕುಮಾರಶ್ರೀಗಳು ಜಯದೇವ ಜಂಗೀಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಇನ್ನು ಕುಸ್ತಿ ವೀಕ್ಷಣೆಗೆ ಜನಸ್ತೋಮವೇ ಕಿಕ್ಕಿರಿದು ಸೇರಿದ್ದು, ಗ್ರಾಮೀಣ ಕ್ರೀಡೆಯ ಖದರ್ ಗೆ ಸಾಕ್ಷಿ ಆಗಿತ್ತು. ಪೈಲ್ವಾನ್ ರು ಅಖಾಡದಲ್ಲಿ ಶಕ್ತಿ ಪ್ರದರ್ಶಿಸಿದಾಗೆಲ್ಲಾ ಜನ ಕೇಕೆ, ಚಪ್ಪಾಳೆ ಹಾಕಿ ಪ್ರೋತ್ಸಾಹಿಸಿ ಬೆನ್ನು ತಟ್ಟಿದರು.
ದೂರದ ಊರುಗಳಿಂದ ಬಂದಿದ್ದ ಕುಸ್ತಿಪಟುಗಳು ಖುಷಿ ವ್ಯಕ್ತಪಡಿಸಿದರು. ಮಹಿಳಾ ಕುಸ್ತಿಪಟುಗಳು ಈ ರೀತಿಯ ಪಂದ್ಯಾವಳಿ ಆಯೋಜನೆ ಮೂಲಕ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಮೂಡುತ್ತದೆ. ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ತೋರಲು ವೇದಿಕೆ ರೂಪಿಸಿದಂತಾಗುತ್ತದೆ ಎಂದು ಹೇಳಿದರು.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಮುರುಘಾಮಠದಲ್ಲಿಂದು ಶರಣಸಂಸ್ಕೃತಿ ಉತ್ಸವದ ಅಂಗವಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ರಾಜ್ಯ , ಹೊರ ರಾಜ್ಯದ ಕ್ರೀಡಾಪಟುಗಳು ಪಂದ್ಯದಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶಿಸಿದ್ದಾರೆ.
ಮಹಿಳೆಯರ ಕುಸ್ತಿ ಈ ಸಲದ ವಿಶೇಷ ಆಕರ್ಷಣೆ ಆಗಿತ್ತು. ಪ್ರತಿವರ್ಷದಂತೆ ವಿಜೇತರಿಗೆ ಬೆಳ್ಳಿಗದೆ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಗ್ರಾಮೀಣ ಕ್ರೀಡಾಭಿಮಾನಿಗಳು ಜಗಜಟ್ಟಿಗಳ ಕಾಳಗ ಕಣ್ತುಂಬಿಕೊಂಡು ಸಖತ್ ಏಂಜಾಯ್ ಮಾಡಿದ್ದಾರೆ.