Kannada News Photo gallery Dharwad Agriculture Fair insect exhibition photos food items made from insects that attracted everyone
ಧಾರವಾಡ ಕೃಷಿ ಮೇಳದಲ್ಲಿ ಗಮನ ಸೆಳೆದ ಚಿಟ್ಟೆಗಳ ಪ್ರದರ್ಶನ, ಕೀಟಗಳಿಂದ ತಯಾರಿಸಿದ ಆಹಾರ
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಹತ್ತಾರು ವರ್ಷಗಳಿಂದ ಕೃಷಿ ಮೇಳ ನಡೆಯುತ್ತಿದೆ. ರೈತರು ಹಾಗೂ ಸಾಮಾನ್ಯ ಜನರನ್ನು ಆಕರ್ಷಿಸುವ ಹತ್ತಾರು ಸಂಗತಿಗಳನ್ನು ಮೇಳದಲ್ಲಿ ಇಲ್ಲಿಯವರೆಗೂ ಗುರುತಿಸಲಾಗಿದೆ. ಅಂಥವುಗಳ ಪೈಕಿ ಕಳೆದ ವರ್ಷದಿಂದ ಸೇರ್ಪಡೆಯಾಗಿದ್ದೇ ಈ ಕೀಟ ಪ್ರಪಂಚ ಪ್ರದರ್ಶನ. ಇವುಗಳನ್ನು ಫೋಟೋಗಳಲ್ಲಿ ನೋಡಿ.
1 / 8
ಕೀಟಗಳ ಜಗತ್ತನ್ನು ತೋರಿಸಲು ಮತ್ತು ಅದರ ಬಗೆಗಿನ ಕುತೂಹಲಕಾರಿ ಸಂಗತಿಗಳನ್ನು ತಿಳಿಸಲು ಧಾರವಾಡದ ಕೃಷಿ ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನ ಮಾಡಲಾಗುತ್ತಿದೆ. ಸೆ. 9 ರಿಂದ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಈ ಮೇಳದಲ್ಲಿ ಅನೇಕ ಬಗೆಯ ಪ್ರದರ್ಶನಗಳಿವೆಯಾದರೂ ಕೀಟಗಳ ಪ್ರದರ್ಶನ ಮತ್ತು ಕೀಟಗಳಿಂದ ತಯಾರಿಸಿದ ಆಹಾರ ಪದಾರ್ಥಗಳು ಎಲ್ಲರ ಗಮನ ಸೆಳೆಯುತ್ತಿದೆ.
2 / 8
ನಿತ್ಯ ನಾವು ಅನೇಕ ಬಗೆಯ ಕೀಟಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಅವುಗಳ ಜೀವನ ಕ್ರಮ, ಆಹಾರ ಪದ್ಧತಿ, ಸಂತಾನೋತ್ಪತ್ತಿಯಂಥ ವಿಚಾರಗಳ ಬಗ್ಗೆ ಅರಿವು ತುಂಬಾನೇ ಕಡಿಮೆ. ಇಂಥ ನೂರಾರು ಕೀಟಗಳನ್ನು ಅವುಗಳ ಬಗೆಗಿನ ಮಾಹಿತಿ ಜೊತೆಗೆ ಒಂದೇ ಸೂರಿನಡಿ ಇಟ್ಟಾಗ ಅದೆಂಥ ಲೋಕ ಅನಾವರಣಗೊಳ್ಳಬಹುದು ಅನ್ನೋದಕ್ಕೆ ಕೃಷಿ ಮೇಳದಲ್ಲಿನ ಕೀಟ ಪ್ರಪಂಚ ಪ್ರದರ್ಶನವೇ ಸಾಕ್ಷಿಯಾಗಿದೆ.
3 / 8
ಹತ್ತಾರು, ಸಾವಿರಾರು ಕೀಟಗಳ ಬಗ್ಗೆ ಕುತೂಹಲಕಾರಿ, ಅಪೂರ್ವ ಸಂಗತಿಗಳನ್ನು ಒಳಗೊಂಡು ಅವುಗಳ ಜೀವಶಾಸ್ತ್ರ, ಸಂತೋನೋತ್ಪತ್ತಿ ಹಾಗೂ ಮಾನವನ ಜೊತೆಗಿನ ಸಂಬಂಧವನ್ನು ವಿಶಿಷ್ಠವಾಗಿ, ವಿಭಿನ್ನವಾಗಿ ಹಾಗೂ ಜನಾಕರ್ಷಣೆಯಾಗಿ ಕೃಷಿ ವಿವಿ ಕೀಟಶಾಸ್ತ್ರ ವಿಭಾಗದ ವತಿಯಿಂದ ಈ ಪ್ರದರ್ಶನದಲ್ಲಿ ತೋರಿಸಲಾಗಿದೆ.
4 / 8
ಸಾಮಾನ್ಯವಾಗಿ ನಾವು ನಿತ್ಯ ನೋಡುವ, ಗಮನಿಸುವ ಚಿಟ್ಟೆ, ದುಂಬಿ, ಜೇಣುನೊಣ, ಇರುವೆ, ಮಿಡತೆ, ಕುಂಬಾರ ಹುಳು, ಜಿರಳೆ, ಶಿವನ ಕುದುರೆ, ರೇಷ್ಮೆಯಂತಹ ಹಲವು ಕೀಟಗಳನ್ನು ಬಳಸಿಕೊಂಡು ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಕಟ್ಟಡದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
5 / 8
ಕ್ರೀಡಾಂಗಣದ ಮಾದರಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಶಿವನ ಕುದುರೆ, ಬೌಲಿಂಗ್ ಮಾಡುತ್ತಿರೋ ಕುಂಬಾರ ಹುಳು, ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರೋ ದೊಂಬಿ ಹುಳು, ಪ್ರೇಕ್ಷಕರಾಗಿ ಸ್ಟೇಡಿಯಂನಲ್ಲಿ ಕುಳಿತಿರೋ ವಿವಿಧ ಕೀಟಗಳು ಜನರಿಗೆ ಅಚ್ಚರಿ ಮೂಡಿಸುತ್ತಿವೆ. ಇನ್ನು ಇದರ ಪಕ್ಕದಲ್ಲಿಯೇ ಪಿಎಚ್ಡಿ ವಿದ್ಯಾರ್ಥಿಗಳಾದ ಮಂದಾರ, ರತ್ನಕಲಾ ಅವರ ಕೀಟ ಸರ್ಕಸ್ ಮಾದರಿಯು ಗಮನ ಸೆಳೆಯುತ್ತಿದೆ.
6 / 8
ಎಲ್ಲರಿಗೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಗೊತ್ತು. ಆದರೆ, ಈ ಕೃಷಿ ಮೇಳದ ಕೀಟ ಪ್ರದರ್ಶನದಲ್ಲಿ ಕೀಟಗಳನ್ನು ಬಳಸಿಕೊಂಡು ಚಿಟ್ಟೆಸ್ವಾಮಿ ಕ್ರೀಡಾಂಗಣ ತಯಾರಿಸಲಾಗಿದೆ. ಈ ಬಾರಿಯ ಕೀಟ ಪ್ರದರ್ಶನದಲ್ಲಿ ‘ಚಿಟ್ಟೆಸ್ವಾಮಿ ಕ್ರೀಡಾಂಗಣ’ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಅನೇಕ ಜಾತಿಯ ಕೀಟಗಳನ್ನು ಬಳಸಿಕೊಂಡು ಕೀಟಶಾಸ್ತ್ರ ವಿಭಾಗದ ಎಂಎಸ್ಸಿ ವಿದ್ಯಾರ್ಥಿಗಳಾದ ನವೀನ್, ಕೃತಿಕಾ ಸಿದ್ಧಪಡಿಸಿದ್ದಾರೆ.
7 / 8
ಅತ್ಯಂತ ಹೆಚ್ಚು ಪ್ರೋಟಿನ್ ಹೊಂದಿರುವ ಕೀಟಗಳನ್ನು ಮನುಷ್ಯ ಪ್ರಮುಖ ಆಹಾರವನ್ನಾಗಿ ಈಗಾಗಲೇ ಅನೇಕ ದೇಶಗಳಲ್ಲಿ ಬಳಸುತ್ತಿದ್ದಾನೆ. ಬದಲಾಗುತ್ತಿರುವ ಆಹಾರ ಪದ್ಧತಿ ಹಿನ್ನೆಲೆಯಲ್ಲಿ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಜೀವಂತ ಹಾಗೂ ಅಜೀವ ಕೀಟಗಳನ್ನು ಬಳಸಿ ಹಲವು ಆಹಾರ ಪದಾರ್ಥಗಳನ್ನು ತಯಾರಿಸಿ, ಪ್ರದರ್ಶನಕ್ಕೆ ಇಡಲಾಗಿದೆ.
8 / 8
ರೇಷ್ಮೆ ಹುಳುವಿನ ಡ್ರೈ ಚಿಲ್ಲಿ, ರೇಷ್ಮೆ ಹುಳುಗಳ ಸೂಪ್, ಕೆಂಪು ಇರುವೆಗಳ ಫ್ರೈ, ಮಿಡತೆ ಹಾಗೂ ಜಿರಳೆ ಡ್ರೈ, ಶಿವನ ಕುದುರೆಯ ತಂದೂರಿ ಹಾಗೂ ಕಪ್ಪು ಸೈನಿಕ ನೊಣದ ಮಸಾಲಾ ಒಂದು ಕ್ಷಣ ಮೈ ಜುಮ್ಮೆನ್ನಿಸುತ್ತವೆ. ಚೀನಾ, ಜಪಾನ್ ದೇಶಗಳಲ್ಲಿ ಜನರು ತಿನ್ನುವ ಹುಳುಗಳ ಆಹಾರವನ್ನು ಇಲ್ಲಿಯೂ ಪ್ರದರ್ಶಿಸಿದ್ದು ಅದ್ಭುತವಾಗಿತ್ತು. ಈ ಪ್ರದರ್ಶನದ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.