
ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಡ್ಯಾನ್ಸರ್ ದಿಶಾ ಮದನ್ ಅವರು ಪ್ರತಿಷ್ಠಿತ 79ನೇ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜಾಗತಿಕ ಮಟ್ಟದ ಈ ಅತ್ಯುನ್ನತ ವೇದಿಕೆಯಲ್ಲಿ ಕನ್ನಡದ ಪ್ರತಿಭೆಯೊಬ್ಬರು ಭಾಗವಹಿಸಿರುವುದು ಇಡೀ ಸ್ಯಾಂಡಲ್‌ವುಡ್ ಮತ್ತು ಅವರ ಅಭಿಮಾನಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ.

ಫ್ರಾನ್ಸ್‌ನ ಈ ಸಿನಿಮೋತ್ಸವದಲ್ಲಿ ದಿಶಾ ಮದನ್ ಅವರು ಅತ್ಯಂತ ಆಕರ್ಷಕ ಹಾಗೂ ಸ್ಟೈಲಿಶ್ ಉಡುಪಿನಲ್ಲಿ ಕಾಣಿಸಿಕೊಂಡು ಜಾಗತಿಕ ಮಾಧ್ಯಮಗಳ ಗಮನ ಸೆಳೆದಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್ ಮೂಲಕ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಅವರು, ಅಂತರರಾಷ್ಟ್ರೀಯ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಈ ಸುಂದರ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿವೆ.

ಕನ್ನಡದ ಕಿರುತೆರೆಯಲ್ಲಿ ಮನೆಮಾತಾಗಿದ್ದ ದಿಶಾ, ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ಸೈ ಎನಿಸಿಕೊಂಡವರು. ಈಗ ಅವರು ‘ಲಕ್ಷ್ಮೀ ನಿವಾಸ’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಾ ಇದ್ದಾರೆ.

ಕೇವಲ ಕಿರುತೆರೆಗೆ ಸೀಮಿತವಾಗದೆ ಡಿಜಿಟಲ್ ಲೋಕದಲ್ಲೂ ಕೋಟ್ಯಂತರ ಫಾಲೋವರ್ಸ್ ಹೊಂದಿರುವ ಅವರು, ಈಗ ಅಂತರರಾಷ್ಟ್ರೀಯ ಮಟ್ಟದ ಕಾನ್ ವೇದಿಕೆಗೆ ಎರಡನೇ ಬಾರಿ ಲಗ್ಗೆ ಇಟ್ಟಿರುವುದು ಅವರ ವೃತ್ತಿಜೀವನದ ಬಹುದೊಡ್ಡ ಮೈಲಿಗಲ್ಲು.

ಸಿನಿಮಾ ರಂಗದ ದಿಗ್ಗಜರು ಹಾಗೂ ಜಾಗತಿಕ ತಾರೆಯರು ಪಾಲ್ಗೊಳ್ಳುವ ಈ ಪ್ರತಿಷ್ಠಿತ ಉತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ದಿಶಾ ಮದನ್ ಅವರಿಗೆ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.