ಕೆಂಟೆ, ಕುಂಟೆಗಳು, ಹೊಲಕ್ಕೆ ಹೋಗುವಾಗ ನೀರು ಕುಡಿಯಲು ಒಯ್ಯುತ್ತಿದ್ದ ತತ್ರಾಣಿ, ನೇಗಿಲು ಹೊಡೆಯುವ ಸಂದರ್ಭದಲ್ಲಿ ಎತ್ತಿನ ಕೊರಳಿಗೆ ಕಟ್ಟುತ್ತಿದ್ದ ಜತ್ತಿಗೆ, ಕಳೆ ತೆಗೆಯಲು ಬಳಸುತ್ತಿದ್ದ ಕುರ್ಚಿಗಿ, ನೊಗ ಹೀಗೆ ಅನೇಕ ರೀತಿಯಲ್ಲಿ ನಮ್ಮ ಜಾನಪದರು ಬಳಸುತ್ತಿದ್ದ ವಸ್ತುಗಳ ನಮಗೆ ನೋಡಲು ಸಿಗುತ್ತವೆ. ಈಗಿನಂತೆ ತೂಕ ಮಾಡಲು ಜನಪದರು ಎಲೆಕ್ಟ್ರಾನಿಕ್ ಉಪಕರಣಗಳನ್ನ ಬಳಸುತ್ತಿರಲಿಲ್ಲ. ಬುಟ್ಟಿಯಿಂದ ತಯಾರಿಸಿದ ಮತ್ತು ಕಬ್ಬಿಣದಿಂದ ತಯಾರಿಸಿದ ತೂಕದ ಯಂತ್ರಗಳನ್ನ ಬಳಕೆ ಮಾಡುತ್ತಿದ್ದರು. ಚಟ್ನಿ ಮಾಡಲು, ಕೊಬ್ಬರಿ ಪುಡಿ ಮಾಡಲು, ವಿವಿಧ ರೀತಿಯ ಪುಡಿ ಖಾದ್ಯ ಮಾಡಲು ಮಿಕ್ಸರ್ ಗ್ರ್ಯಾಂಡರ್ ಇರಲಿಲ್ಲ. ಬದಲಾಗಿ ಕಲ್ಲಿನಿಂದ ತಯಾರಿಸಿದ ಕಾರಾ ಕುಟ್ಟುವ ಕಲ್ಲು, ರುಬ್ಬುವ ಕಲ್ಲುಗಳಲ್ಲಿ ಚಟ್ನಿ ತಯಾರು ಮಾಡುತ್ತಿದ್ದರು.