- Kannada News Photo gallery Haveri Untouchability Dalit woman and son assaulted for entering temple at Haveri news in kannada
ಕನಕದಾಸರ ತವರೂರಲ್ಲೇ ಅಸ್ಪೃಶ್ಯತೆ ಜೀವಂತ; ದೇವಸ್ಥಾನ ಪ್ರವೇಶಿಸಿದ ತಾಯಿ, ಮಗನ ಮೇಲೆ ಸವರ್ಣೀಯರಿಂದ ಹಲ್ಲೆ!
ಅಸ್ಪೃಶ್ಯತೆ ತೊಡೆದು ಹಾಕಲು ಕಾನೂನು ಇದ್ದರೂ ದೇಶದಲ್ಲಿ ಈ ಕೆಟ್ಟ ಪದ್ದತಿಯನ್ನು ಸಂಪೂರ್ಣವಾಗಿ ತೊಡೆದುಹಾಕುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ. ಅದಾಗ್ಯೂ, ಕರ್ನಾಟಕದಲ್ಲಿ ವಿನಯ ಸಾಮರಾಸ್ಯ ಯೋಜನೆ ಯಾರಿಯಾದರೂ ಹಾವೇರಿಯಲ್ಲಿ ಅಸ್ಪೃಶ್ಯತೆ ಪ್ರಕರಣ ಬೆಳಕಿಗೆಬಂದಿದೆ.
Updated on:Mar 05, 2023 | 7:26 PM

ಹಾವೇರಿ: ದೇಗುಲದ ಒಳಗೆ ಕನಕದಾಸರಿಗೆ ಪ್ರವೇಶ ನಿರಾಕರಿದ ಹಿನ್ನಲೆ ಹೊರಭಾಗದಲ್ಲಿ ಭಜನೆ ಮಾಡುತ್ತಿದ್ದಾಗ ಭಕ್ತಿಗೆ ಒಲಿದ ಶ್ರೀಕೃಷ್ಣ ಗೋಡೆ ಒಡೆದು ಪೂರ್ವದಿಂದ ಕನಕದಾಸರಿದ್ದ ಪಶ್ಚಿಮ ದಿಕ್ಕಿಗೆ ಮುಖಮಾಡಿ ದರ್ಶನ ನೀಡಿರುವುದು ಪುರಾಣಗಳಲ್ಲಿ ದಾಖಲಾಗಿರುವ ಸಂಗತಿ. ಭಕ್ತಿಯಿಂದ ಶ್ರೀಕೃಷ್ಣನನ್ನೇ ಒಲಿಸಿದ ಕನಕದಾಸರ ತವರು ಜಿಲ್ಲೆಯಲ್ಲೇ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ದುರ್ದೈವ.

ದೇವಸ್ಥಾನ ಪ್ರವೇಶಿಸಿದ್ದ ದಲಿತ ಮಹಿಳೆ ಮತ್ತು ಆಕೆಯ ಮಗನ ಮೇಲೆ ಸವರ್ಣೀಯರು ಹಲ್ಲೆ ನಡೆಸಿ ದಾಂದಲೆ ನಡೆಸಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಂದಿಹಳ್ಳಿಯಲ್ಲಿ ನಡೆದಿದೆ. ನಂದಿಹಳ್ಳಿಯ ಬಸವೇಶ್ವರ ದೇಗುಲಕ್ಕೆ ದಲಿತರಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಆದರೆ ಇದನ್ನು ಲೆಕ್ಕಿಸದೆ ಮಹಿಳೆ ತನ್ನ ಮಗನೊಂದಿಗೆ ಬಸವೇಶ್ವರನ ದರ್ಶನಕ್ಕೆ ದೇಗುಲದ ಒಳ ಪ್ರವೇಶ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸವರ್ಣೀಯರು, ಗುಂಪುಕಟ್ಟಿಕೊಂಡು ದೇಗುಲ ಪ್ರವೇಶಿಸಿದವರ ಮನೆ ಮೇಲೆ ದಾಳಿ ಮಾಡಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.

ಹೆಮ್ಮವ್ವ ಮಲ್ಲಾಡದ ಮತ್ತು ಇವರ ಮಗ ರಮೇಶ್ ಮಲ್ಲಾಡದ ಅವರು ಜಾತ್ರಾ ಮಹೋತ್ಸವದ ಪ್ರಯುಕ್ತ ನಂದಿಹಳ್ಳಿಯಲ್ಲಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ. ಇಲ್ಲಿ ದೇವರ ದರ್ಶನ ಪಡೆಯುವ ನಿಟ್ಟಿನಲ್ಲಿ ದೇಗುಲದ ಒಳಗೆ ಪ್ರವೇಶಿಸಲು ಮುಂದಾದಾಗ ತಡೆದ ಸವರ್ಣೀಯರು ಒಳ ಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಸವರ್ಣೀಯರ ಎಚ್ಚರಿಕೆಗೆ ಜಗ್ಗದ ತಾಯಿ ಮತ್ತು ಮಗ ಇಬ್ಬರೂ ದೇಗುಲದ ಒಳಗೆ ಪ್ರವೇಶ ಮಾಡಿ ಬಸವೇಶ್ವರನ ದರ್ಶನ ಪಡೆದಿದ್ದಾರೆ.

ಆದರೆ ದಲಿತರು ಬಸವೇಶ್ವರ ದೇಗುಲ ಪ್ರವೇಶಿಸಿದ್ದಕ್ಕೆ ಆಕ್ರೋಶಗೊಂಡ ಸವರ್ಣೀಯರು, ಗುಂಪು ಕಟ್ಟಿಕೊಂಡು ಹೆಮ್ಮವ್ವ ಮಲ್ಲಾಡದ ಮನೆ ಬಳಿ ಬಂದು ದಾಂದಲೆ ನಡೆಸಿದ್ದಲ್ಲದೆ, ಹೆಮ್ಮವ್ವ ಮತ್ತು ಮಗ ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಮನೆ ಮೇಲೂ ದಾಳಿ ನಡೆಸಿ ಹೆಂಚುಗಳು ಹಾನಿಗೊಳಿಸಲಾಗಿದ್ದು, ಬೈಕ್ ಜಖಂಗೊಳಿಸಲಾಗಿದೆ. ಘಟನೆ ನಂತರ ಹಲಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ತಾಯಿ-ಮಗ ಸುಮಾರು 30 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

ಅಸ್ಪೃಶ್ಯತಾ ಆಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಿ ಶತಮಾನ ವರ್ಷಗಳು ಕಳೆದರೂ ಕೂಡಾ ಈಗಲೂ ಸಹ ಗ್ರಾಮೀಣ ಭಾಗಗಳಲ್ಲಿ ಅಸ್ಪೃಶ್ಯತೆ ಎಂಬ ಅನಿಷ್ಠ ಪದ್ಧತಿ ಆಚರಣೆಯಲ್ಲಿರುವುದು ನೋವಿನ ಸಂಗತಿಯಾಗಿದೆ. ಅಸ್ಪೃಶ್ಯತೆ ನಿವಾರಣೆಗಾಗಿಯೇ ಸರ್ಕಾರ ಹಾಗೂ ಸಂವಿಧಾನವೂ ವಿಶೇಷ ಕಾನೂನುಗಳನ್ನು ರೂಪಿಸಿದೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಟಕ, ಗೀಗಿ ಪದ ಸೇರಿದಂತೆ ವಿವಿಧ ರೀತಿಯ ಕಲೆ, ಕಲಾವಿದರು ಹಾಗೂ ಮಾಧ್ಯಮಗಳಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೆ ಅನಿಷ್ಠ ಪದ್ಧತಿ ಮಾತ್ರ ಸಂಪೂರ್ಣವಾಗಿ ಕಣ್ಮರೆಯಾಗುತ್ತಿಲ್ಲ.
Published On - 7:26 pm, Sun, 5 March 23



















