ಬೆಳಗಾವಿಯಲ್ಲಿ ಭಾರತ ಜಪಾನ್ ಸೇನೆ ನಡುವೆ ಜಂಟಿ ಸಮರಾಭ್ಯಾಸ; ಇಲ್ಲಿದೆ ಫೋಟೋಗಳು
ಬೆಳಗಾವಿಯಲ್ಲಿ ಇಂದು ಭಾರತ -ಜಪಾನ್ ಸೇನೆ ನಡುವೆ ಜಂಟಿ ಸಮರಾಭ್ಯಾಸ ನಡೆದಿದೆ. ಬೆಳಗಾವಿಯ ಮರಾಠಾ ಲಘುಪದಾತಿ ದಳ ಹಾಗೂ ಜಪಾನ್‌ನ ತಲಾ 40 ಯೋಧರು ಈ ತರಬೇತಿಯಲ್ಲಿ ಭಾಗಿಯಾಗಿದ್ದಾರೆ. ಉಗ್ರರ ಅಡಗುತಾಣಗಳ ಮೇಲೆ ಹೇಗೆ ದಾಳಿ ಮಾಡಬೇಕೆಂಬ ಬಗ್ಗೆ ತರಬೇತಿ ನೀಡಲಾಗಿದೆ. ಸೇನಾ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡುವ ತರಬೇತಿ ನೀಡಿದೆ.
Updated on: Mar 08, 2022 | 5:49 PM

ಒಂದು ಕಡೆ ರಷ್ಯಾ ಉಕ್ರೇನ್ ನಡುವೆ ಭೀಕರ ಯುದ್ದ ಶುರುವಾಗಿದೆ. ಮೂರನೇ ಮಹಾಯುದ್ಧಕ್ಕೆ ಮುನ್ಸೂಚನೆ ಅಂತಾನೂ ಹೇಳಲಾಗುತ್ತಿದೆ. ಆದ್ರೇ ಇದೇ ಸಂದರ್ಭದಲ್ಲಿ ಭಾರತ ಮತ್ತು ಜಪಾನ್ ದೇಶ ಜಂಟಿ ಮಿಲಿಟರಿ ಅಭ್ಯಾಸ ನಡೆಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಕರುನಾಡಿನಲ್ಲೇ ಈ ಸಮರಾಭ್ಯಾಸ ನಡೆಯುತ್ತಿರುವುದು ಮತ್ತೊಂದು ವಿಶೇಷ. ಮೈನವಿರೇಳಿಸುವಂತಿದೆ ಕುಂದಾನಗರಿಯಲ್ಲಿರುವ ಮರಾಠಾ ರೆಜಿಮೆಂಟ್ನಲ್ಲಿ ನಡೆಯುತ್ತಿರುವ ಸಮರಾಭ್ಯಾಸ.

ಬೆಳಗಾವಿಯಲ್ಲಿರುವ ಮರಾಠಾ ಲಘು ಪದಾತಿ ದಳ ಕೇಂದ್ರದಲ್ಲಿ ಬರೀ ನಮ್ಮ ದೇಶದ ಯೋಧರು ಮಾತ್ರ ಇಲ್ಲ ಅವರೊಂದಿಗೆ ಜಪಾನ್ನ ಯೋಧರು ಕೂಡ ಭಾಗಿಯಾಗಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಹೌದು ಫೆ.27ರಿಂದ ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿರುವ ಮರಾಠಾ ರೆಜಿಮೆಂಟ್ನಲ್ಲಿ ಈ ಜಂಟಿ ಮಿಲಟರಿ ಅಭ್ಯಾಸ ಶುರುವಾಗಿದ್ದು, 12 ದಿನಗಳ ಕಾಲ ನಡೆಯುವ ಈ ಸಮರಾಭ್ಯಾಸದಲ್ಲಿ ಧರ್ಮ ಗಾರ್ಡಿಯನ್ 2022 ಕಾರ್ಯಕ್ರಮದ ಹೆಸರಲ್ಲಿ ನಡೆಯುತ್ತಿದೆ.

1999ರಿಂದಲೂ ವಿವಿಧ ದೇಶಗಳ ಜತೆಗೆ ಈ ಸಮರಾಭ್ಯಾಸ ನಡೆಯುತ್ತಿದ್ದು, ಈ ಬಾರಿ ಜಪಾನ್ ಜತೆಗೆ ಸಮರಾಭ್ಯಾಸ ನಡೆಯುತ್ತಿದೆ. ಭಾರತೀಯ ಸೇನೆಯ 15ನೇ ಬೆಟಾಲಿಯನ್ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಮತ್ತು ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದಾರೆ.

ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲಕರವಾಗಿರುವ ಈ ಸಮರಾಭ್ಯಾಸ. ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ, ಮನೆಗಳ ಮೇಲಿನ ಡ್ರಿಲ್‌ಗಳು, ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆಯ ತರಬೇತಿ ಸೇರಿ ವಿವಿಧ ಹಂತದ ಕಾರ್ಯಾಚರಣೆಗಳನ್ನ ನಡೆಸಲಾಗುತ್ತಿದೆ.

ಇನ್ನೂ ಇಂದು ನಡೆದ ಸಮರಾಭ್ಯಾಸದಲ್ಲಿ ಮೊದಲು ಎರಡು ದೇಶದ ಯೋಧರಿಗೆ ಉಗ್ರರ ಅಡಗು ತಾಣಗಳ ಮೇಲೆ ಹೇಗೆ ದಾಳಿಯನ್ನ ನಡೆಸಬೇಕು. ಯಾವ ರೀತಿಯಾಗಿ ಜಂಟಿ ಆಪರೇಷನ್ ಮಾಡಬೇಕು ಅದೆಲ್ಲವನ್ನೂ ಒಂದೂವರೆಗಳ ಕಾಲ ವಿವರಣೆ ಮಾಡಲಾಯಿತು. ಹೇಗೆಲ್ಲಾ ಪ್ಲ್ಯಾನ್ ಮಾಡಿಕೊಂಡು ಉಗ್ರರು ಅಡಗಿರುವ ತಾಣಗಳಿಗೆ ಹೋಗಬೇಕು ಅಲ್ಲಿ ಒಟ್ಟಾಗಿ ಕಾರ್ಯಚರಣೆ ನಡೆಸುವುದು ಹೇಗೆ ಮತ್ತು ಈ ವೇಳೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವುದು ಹೇಗೆ ಎಲ್ಲವನ್ನೂ ಮ್ಯಾಪ್ ಮುಖಾಂತರ ವಿವರಣೆ ಮಾಡಲಾಯಿತು.

ಹೆಲಿಕ್ಯಾಪ್ಟರ್ನಲ್ಲಿ ಎರಡು ದೇಶದ ಯೋಧರು ಶಸ್ತ್ರ ಸಜ್ಜಿತರಾಗಿ ಹಗ್ಗದ ಮೂಲಕ ಕೆಳಗಿಳಿಯುವ ದೃಶ್ಯ ಮೈನವಿರೇಳಿಸುವಂತಿತ್ತು. ಇದಾದ ಬಳಿಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನ ಹಿಡಿದುಕೊಂಡು ಯೋಧರು ತಾಲೀಮು ನಡೆಸಿದ್ದು ರೋಮಾಂಚನಕಾರಿಯಾಗಿತ್ತು. ಇನ್ನೂ ಭಾರತ ಜಪಾನ್ ಯೋಧರ ಜಂಟಿ ಸಮರಾಭ್ಯಾಸ ಬ್ರಿಗೇಡಿಯರ್ ಎನ್ ಎಸ್ ಸೋಹಾಲ್ ಕಮಾಂಡರ್ 115 ಬ್ರಿಗೇಡ್. ಮೇಜರ್ ಜನರಲ್ ಭವಿನೀಷ್ ಕುಮಾರ್ ಜನರಲ್ ಆಫೀಸರ್ ಕಮಾಂಡಿಂಗ್ 36 ಇನ್ಫೆಂಟ್ರಿ ಡಿವಿಜನ್ ಇವರ ನೇತೃತ್ವದಲ್ಲಿ ನಡೆಯಿತು.



















