ಬಿಡುಗಡೆ ಆಗ್ತಿದೆ ಸಾಲುಸಾಲು ಸ್ಟಾರ್ ಚಿತ್ರಗಳು; ಇಲ್ಲಿದೆ ಪ್ರಮುಖ 9 ಸಿನಿಮಾಗಳ ರಿಲೀಸ್ ದಿನಾಂಕ
TV9 Web | Updated By: ರಾಜೇಶ್ ದುಗ್ಗುಮನೆ
Updated on:
Jan 31, 2022 | 9:01 PM
ಕೊವಿಡ್ ಮೂರನೇ ಅಲೆಯ ಅಬ್ಬರ ಕಡಿಮೆ ಆಗುತ್ತಿದೆ. ಹೀಗಾಗಿ, ಚಿತ್ರರಂಗದಲ್ಲಿ ಮತ್ತೆ ಚಟುವಟಿಕೆ ಶುರುವಾಗಿದೆ. ಸಾಲುಸಾಲು ಸಿನಿಮಾಗಳು ಹೊಸ ರಿಲೀಸ್ ದಿನಾಂಕ ಘೋಷಣೆ ಮಾಡಿಕೊಳ್ಳುತ್ತಿವೆ. ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೆ ಹಲವು ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿವೆ.
1 / 10
ಕೊವಿಡ್ ಮೂರನೇ ಅಲೆಯ ಅಬ್ಬರ ಕಡಿಮೆ ಆಗುತ್ತಿದೆ. ಹೀಗಾಗಿ, ಚಿತ್ರರಂಗದಲ್ಲಿ ಮತ್ತೆ ಚಟುವಟಿಕೆ ಶುರುವಾಗಿದೆ. ಸಾಲುಸಾಲು ಸಿನಿಮಾಗಳು ಹೊಸ ರಿಲೀಸ್ ದಿನಾಂಕ ಘೋಷಣೆ ಮಾಡಿಕೊಳ್ಳುತ್ತಿವೆ. ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೆ ಹಲವು ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿವೆ. ಇದು ಸಿನಿಪ್ರಿಯರ ಸಂತಸ ಹೆಚ್ಚಿಸಿದೆ. ‘ಆರ್ಆರ್ಆರ್’, ‘ಜೇಮ್ಸ್’, ‘ಭೀಮ್ಲಾ ನಾಯಕ್’ ಮೊದಲಾದ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
2 / 10
‘ಜೇಮ್ಸ್’: ಪುನೀತ್ ನಟನೆಯ ಕೊನೇ ಸಿನಿಮಾ ಎಂಬ ಕಾರಣಕ್ಕೆ ‘ಜೇಮ್ಸ್’ ಮೇಲೆ ಅಭಿಮಾನಿಗಳಿಗೆ ಎಲ್ಲಿಲ್ಲದ ನಿರೀಕ್ಷೆ ಇದೆ. ಚೇತನ್ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದೆ. ಈ ವರ್ಷ ಪುನೀತ್ ಜನ್ಮದಿನದ ಪ್ರಯುಕ್ತ ಮಾ.17ರಂದು ‘ಜೇಮ್ಸ್’ ರಿಲೀಸ್ ಆಗಬೇಕು ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮಾ.17ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇಟ್ಟುಕೊಂಡೇ ಚಿತ್ರತಂಡ ಹಗಲಿರುಳು ಶ್ರಮಿಸುತ್ತಿದೆ ಎನ್ನಲಾಗಿದೆ.
3 / 10
‘ರಾಧೆ ಶ್ಯಾಮ್’: ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇತ್ತೀಚೆಗೆ ಬಿಡುಗಡೆ ಆದ ಟ್ರೇಲರ್ ಕೂಡ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾ ಸಂಕ್ರಾಂತಿ ನಿಮಿತ್ತ ಜನವರಿ 14ರಂದು ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡುವ ಅನಿವಾರ್ಯತೆ ಎದುರಾಗಿತ್ತು. ಈ ಚಿತ್ರ ಮಾರ್ಚ್ 4 ಅಥವಾ 11ರಂದು ತೆರೆಗೆ ಬರಲಿದೆ ಎನ್ನಲಾಗಿದೆ.
4 / 10
‘ಆರ್ಆರ್ಆರ್’: ಎಸ್ಎಸ್ ರಾಜಮೌಳಿ ನಿರ್ದೇಶನ ಇರುವ ‘ಆರ್ಆರ್ಆರ್’ಸಿನಿಮಾದಲ್ಲಿ, ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಬಾಲಿವುಡ್ನ ಖ್ಯಾತ ನಟಿ ಆಲಿಯಾ ಭಟ್ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಅಜಯ್ ದೇವಗನ್ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಟ್ರೇಲರ್ ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ. ಈ ಚಿತ್ರ ಮಾರ್ಚ್ 25ರಂದು ತೆರೆಗೆ ಬರುತ್ತಿದೆ.
5 / 10
ಭಿಮ್ಲಾ ನಾಯಕ್: ಮಲಯಾಳಂನ ‘ಅಯ್ಯಪ್ಪನುಮ್ ಕೋಶಿಯುಮ್’ ಸಿನಿಮಾದ ರಿಮೇಕ್ ‘ಭಿಮ್ಲಾ ನಾಯಕ್’. ಪೊಲೀಸ್ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಪೃಥ್ವಿರಾಜ್ ಹಾಗೂ ಬಿಜು ಮೆನನ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್ ಕಲ್ಯಾಣ್ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಮಾರ್ಚ್ 25 ಅಥವಾ ಏಪ್ರಿಲ್ 1ರಂದು ತೆರೆಗೆ ಬರಲಿದೆ.
6 / 10
ಕೆಜಿಎಫ್ 2: ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್ 2’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ಈ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ.
7 / 10
ಬೀಸ್ಟ್: ಹೊಸ ವರ್ಷದ ಪ್ರಯುಕ್ತ ‘ಬೀಸ್ಟ್’ ಸಿನಿಮಾ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿತ್ತು. ಈ ಪೋಸ್ಟರ್ನಲ್ಲಿ ಏಪ್ರಿಲ್ನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡುವ ಬಗ್ಗೆ ತಂಡ ಮಾಹಿತಿ ನೀಡಿತ್ತು. ಆದರೆ, ರಿಲೀಸ್ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಈ ಚಿತ್ರ ಕೂಡ ಏಪ್ರಿಲ್ ತಿಂಗಳಲ್ಲೇ ತೆರೆಗೆ ಬರುವ ನಿರೀಕ್ಷೆ ಇದೆ.
8 / 10
ಲಾಲ್ ಸಿಂಗ್ ಛಡ್ಡಾ: ಇಂಗ್ಲಿಷ್ನಲ್ಲಿ ತೆರೆಗೆ ಬಂದ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ‘ಲಾಲ್ ಸಿಂಗ್ ಛಡ್ಡಾ’. ಆಮಿರ್ ಖಾನ್ ಹೆಚ್ಚು ಇಷ್ಟಪಟ್ಟು ಈ ಸಿನಿಮಾವನ್ನು ನಿರ್ಮಿಸಿ, ನಟಿಸುತ್ತಿದ್ದಾರೆ. ಈ ಸಿನಿಮಾ ಕಳೆದ ವರ್ಷ ಕ್ರಿಸ್ಮಸ್ಗೆ ತೆರೆಗೆ ಬರಬೇಕಿತ್ತು. ಆದರೆ, ಎಲ್ಲ ಕೆಲಸಗಳು ವಿಳಂಬವಾಗಿವೆ. ಹೀಗಾಗಿ, ಈ ‘ಲಾಲ್ ಸಿಂಗ್ ಛಡ್ಡಾ’ ಏಪ್ರಿಲ್ 14ಕ್ಕೆ ತೆರೆಕಾಣುತ್ತಿದೆ.
9 / 10
ಆಚಾರ್ಯ: ಚಿರಂಜೀವಿ, ರಾಮ್ ಚರಣ್, ಪೂಜಾ ಹೆಗ್ಡೆ, ಕಾಜಲ್ ಅಗರ್ವಾಲ್, ಸೋನು ಸೂದ್ ಮುಂತಾದವರು ನಟಿಸಿರುವ ‘ಆಚಾರ್ಯ’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮಣಿ ಶರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ಗಳು ಕೌತುಕ ಮೂಡಿಸಿವೆ. ಈ ಸಿನಿಮಾ ಏಪ್ರಿಲ್ 29ಕ್ಕೆ ತೆರೆಗೆ ಬರುತ್ತಿದೆ.
10 / 10
ಸರ್ಕಾರು ವಾರಿ ಪಾಟ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2022ರ ಸಂಕ್ರಾಂತಿ ಹಬ್ಬಕ್ಕೆ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ಬಿಡುಗಡೆ ದಿನಾಂಕವನ್ನು ಏಪ್ರಿಲ್ 1ಕ್ಕೆ ಮುಂದೂಡಲಾಯಿತು. ಈಗ ‘ಸರ್ಕಾರು ವಾರಿ ಪಾಟ’ ಸಿನಿಮಾವನ್ನು ಮೇ 12ರಂದು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಘೋಷಣೆ ಮಾಡಿದೆ.
Published On - 9:00 pm, Mon, 31 January 22