
ಕೃಷ್ಣ ಅಜಯ್ ರಾವ್ ಅವರ ಹೊಸ ಸಿನಿಮಾ ‘ರಾಧೇಯ’ ಈ ವಾರ (ನವೆಂಬರ್ 21) ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ವೇದಗುರು ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ.

ಹಲವಾರು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ವೇದಗುರು ಅವರಿಗೆ ಇದೆ. ‘ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ’ ಬ್ಯಾನರ್ ಮೂಲಕ ವೇದಗುರು ಅವರೇ ‘ರಾಧೆಯಾ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಕೃಷ್ಣ ಅಜಯ್ ರಾವ್ ಮತ್ತು ಸೋನಲ್ ಮಂತೆರೋ ಅವರು ಜೋಡಿಯಾಗಿ ನಟಿಸಿದ್ದಾರೆ. ಮಹಾಭಾರತದ ಕರ್ಣನ ಇನ್ನೊಂದು ಹೆಸರು ‘ರಾಧೇಯ’. ಚಿತ್ರದ ಶೀರ್ಷಿಕೆ ಕೌತುಕ ಮೂಡಿಸಿದೆ.

ಇದೊಂದು ಲವ್ ಸ್ಟೋರಿ ಸಿನಿಮಾ ಆದರೂ ಬೇರೆಯದೇ ರೀತಿಯಲ್ಲಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಜೈಲಿನಲ್ಲಿರುವ ವ್ಯಕ್ತಿಯೊಬ್ಬನ ಪಾತ್ರದ ಸುತ್ತ ಈ ಚಿತ್ರದ ಕಥೆ ಸಾಗಲಿದೆ ಎಂದು ‘ರಾಧೇಯ’ ಚಿತ್ರತಂಡ ಹೇಳಿದೆ.

ಕಥಾನಾಯಕ ರಾಧೇಯ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ? ಅದಕ್ಕಾಗಿ ಆತ ಏನೆಲ್ಲಾ ಅಡ್ಡಿ, ಆತಂಕಗಳನ್ನು ಎದುರಿಸುತ್ತಾನೆ ಎಂಬುದನ್ನು ಈ ಸಿನಿಮಾ ಮೂಲಕ ನಿರ್ದೇಶಕ ವೇದಗುರು ಅವರು ತೋರಿಸಲಿದ್ದಾರೆ.