Updated on: Jun 04, 2022 | 12:31 PM
ನಟ ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡಿದ್ದು ತೀವ್ರ ನೋವಿನ ಸಂಗತಿ. ಕಳೆದ ವರ್ಷ ಜೂನ್ 15ರಂದು ನಿಧನರಾದ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಯಿತು. ವಿಜಯ್ ಇಲ್ಲದೇ ಒಂದು ವರ್ಷ ಕಳೆಯುತ್ತಿದೆ. ಹಿಂದೂ ಪಂಚಾಂಗದ ಪ್ರಕಾರ ಇಂದು (ಜೂನ್ 4) ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯ ಮಾಡಲಾಗಿದೆ.
ಅದ್ಭುತ ನಟನೆಯಿಂದ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಅಪ್ರತಿಮ ಕಲಾವಿದ ಸಂಚಾರಿ ವಿಜಯ್. ಅವರು ಇಲ್ಲ ಎಂಬ ಕೊರಗು ಅಭಿಮಾನಿಗಳು ಮತ್ತು ಆಪ್ತರ ಎದೆಯಲ್ಲಿ ಎಂದಿಗೂ ಕೊನೆಯಾಗುವುದಿಲ್ಲ. ಅವರ ನೆನಪುಗಳು ಅಮರ. ಅವರ ನೆನಪಿಗಾಗಿ ಪ್ರತಿಮೆ ನಿರ್ಮಿಸಲಾಗಿದೆ.
ಸಂಚಾರಿ ವಿಜಯ್ ಅವರ ಅಂತ್ಯ ಸಂಸ್ಕಾರವನ್ನು ಹುಟ್ಟೂರಾದ ಪಂಚನಹಳ್ಳಿಯಲ್ಲಿ ಮಾಡಲಾಗಿತ್ತು. ಇಂದು ಅಲ್ಲಿಯೇ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಲಾಗಿದೆ. ಅಂತ್ಯ ಸಂಸ್ಕಾರ ನಡೆದ ಜಾಗದಲ್ಲಿ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.
ಪುಣ್ಯ ಸ್ಮರಣೆ ಮತ್ತು ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಂಚಾರಿ ವಿಜಯ್ ಕುಟುಂಬದವರು ಮತ್ತು ಆಪ್ತರು ಪಾಲ್ಗೊಂಡಿದ್ದಾರೆ. ವಿಜಯ್ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಕೋರಲಾಗಿದೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನನ್ನು ಸ್ಮರಿಸುತ್ತಿದ್ದಾರೆ.
‘ಹರಿವು’, ‘ನಾನು ಅವನಲ್ಲ ಅವಳು’, ‘ನಾತಿಚರಾಮಿ’ ಮುಂತಾದ ಗಮನಾರ್ಹ ಸಿನಿಮಾಗಳಲ್ಲಿ ಸಂಚಾರಿ ವಿಜಯ್ ನಟಿಸಿದ್ದರು. ‘ನಾನು ಅವನಲ್ಲ ಅವಳು’ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್ಫೇರ್ ಪ್ರಶಸ್ತಿ ಪಡೆದಿದ್ದ ಪ್ರತಿಭಾವಂತ ಅವರು. ಪ್ರೇಕ್ಷಕರ ಮನದಲ್ಲಿ ಸಿನಿಮಾಗಳ ಮೂಲಕ ಅವರು ಶಾಶ್ವತ ಸ್ಥಾನ ಪಡೆದಿದ್ದಾರೆ.
Published On - 12:31 pm, Sat, 4 June 22