
ವಿಶ್ವ ಫುಟ್‌ಬಾಲ್‌ನ ಇಬ್ಬರು ಧ್ರುವತಾರೆಗಳಾದ ಲಿಯೋನೆಲ್ ಮೆಸ್ಸಿ (Lionel Messi) ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ನಡುವಿನ ಪೈಪೋಟಿ ಈ ಬಾರಿಯ ವಿಶ್ವಕಪ್ನಲ್ಲೂ ಮುಂದುವರೆಯುವ ಸಾಧ್ಯತೆಯಿದೆ. ಏಕೆಂದರೆ ಮೊದಲ ಪಂದ್ಯದಲ್ಲೇ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಲ್ಲಿದ್ದ ಐತಿಹಾಸಿಕ ವಿಶ್ವಕಪ್ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ. (PC: gettyimages)

ಈ ದಾಖಲೆಯನ್ನು ಮರು ಸೃಷ್ಟಿಸಲು ಕ್ರಿಸ್ಟಿಯಾನೊ ರೊನಾಲ್ಡೊಗೆ ಉತ್ತಮ ಅವಕಾಶ ಇರುವುದರಿಂದ ಈ ಬಾರಿಯ ವಿಶ್ವಕಪ್ನಲ್ಲೂ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಅಷ್ಟಕ್ಕೂ ಮೆಸ್ಸಿ ಮುರಿದಿರುವ ಆ ದಾಖಲೆ ಯಾವುದು ಎಂದು ನೋಡುವುದಾದರೆ... (PC: gettyimages)

ಅಲ್ಜೀರಿಯಾ ವಿರುದ್ಧದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಹ್ಯಾಟ್ರಿಕ್ ಗೋಲು ದಾಖಲಿಸಿದ್ದಾರೆ. ಈ ಮೂರು ಗೋಲುಗಳೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ಟಿಯಾನೋ ರೊನಾಲ್ಡೊ ಹೆಸರಿನಲ್ಲಿತ್ತು. (PC: gettyimages)

2018ರ ಫಿಫಾ ವಿಶ್ವಕಪ್ನಲ್ಲಿ ಪೋರ್ಚುಗಲ್ ತಂಡದ ಪರ ಕಣಕ್ಕಿಳಿದ ಕ್ರಿಸ್ಟಿಯಾನೊ ರೊನಾಲ್ಡೊ ಬಲಿಷ್ಠ ಸ್ಪೇನ್ ವಿರುದ್ಧ ಹ್ಯಾಟ್ರಿಕ್ ಗೋಲು ದಾಖಲಿಸಿದ್ದರು. ಈ ವೇಳೆ ರೊನಾಲ್ಡೊ ಅವರ ವಯಸ್ಸು 33 ವರ್ಷ, 130 ದಿನಗಳು. ಈ ಮೂಲಕ ಫುಟ್ಬಾಲ್ ವಿಶ್ವಕಪ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. (PC: gettyimages)

ಇದೀಗ ಈ ದಾಖಲೆಯನ್ನು ಲಿಯೋನೆಲ್ ಮೆಸ್ಸಿ ಮುರಿದಿದ್ದಾರೆ. ಅಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ 38 ವರ್ಷದ ಮೆಸ್ಸಿ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: gettyimages)