- Kannada News Photo gallery Lok Sabha Elections: Prajadhwani 2.0 election campaign by Congress starts from Kurudumale, Kolar
ಪ್ರಜಾಧ್ವನಿ 2.O ಪ್ರಚಾರಕ್ಕೆ ಕಾಂಗ್ರೆಸ್ ಚಾಲನೆ: ಕುರುಡುಮಲೆ ಸನ್ನಿಧಿಯಿಂದ ಕೈಪಡೆ ರಣಕಹಳೆ
ಲೋಕಸಭೆ ಚುನಾವಣೆಯಲ್ಲಿ 20 ಕ್ಷೇತ್ರ ಗೆಲ್ಲಲು ಪಣ ತೊಟ್ಟಿರುವ ಕಾಂಗ್ರೆಸ್ ಇಂದಿನಿಂದ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದೆ. ಕೋಲಾರದ ಕುರುಡುಮಲೆಯಿಂದ ರಣಕಹಳೆ ಊದಿದೆ. ಹಾಗಾದರೆ, ಕುರುಡುಮಲೆಯಿಂದಲೇ ಚುನಾವಣೆಗೆ ಪಾಂಚಜನ್ಯ ಮೊಳಗಿಸಿದ್ದೇಕೆ? ಕಾಂಗ್ರೆಸ್ ನಾಯಕರು ಕುರುಡುಮಲೆಯಿಂದ ಪ್ರಚಾರ ಆರಂಭಿಸಿದ್ದೇಕೆ? ಇಲ್ಲಿದೆ ವಿವರ.
Updated on: Apr 06, 2024 | 2:44 PM

ಬಿಜೆಪಿ ಜೆಡಿಎಸ್ ಮೈತ್ರಿ ರಣತಂತ್ರಗಳನ್ನು ಬುಡಮೇಲು ಮಾಡಿ ರಾಜ್ಯದ 20 ಕ್ಷೇತ್ರದಲ್ಲಿ ಗೆಲುವಿನ ಬಾವುಟ ಹಾರಿಸಲು ಕೈ ಪಡೆ ನಾಯಕರು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಇದರ ಭಾಗವಾಗಿಯೇ ಇವತ್ತು ಕೋಲಾರದ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕ ದೇವಸ್ಥಾನದಿಂದ ಪ್ರಚಾರಕ್ಕೆ ಅಧಿಕೃತ ಜಾಲನೆ ನೀಡಿದ್ದಾರೆ.

ಲೋಕಸಭೆ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಪಡೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಕೋಲಾರದ ಮುಳಬಾಗಿಲು ಬಳಿ ಇರೋ ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಪಾಂಚಜನ್ಯ ಮೊಳಗಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಗಿದ್ದು, ಪೂಜೆ ಬಳಿಕ ಭರ್ಜರಿ ರೋಡ್ ಶೋ ನಡೆಸಿದ್ದಾರೆ.

ವಿನಾಯಕನಿಗೆ ಪೂಜೆ ಸಲ್ಲಿಸಿದ ಬಳಿಕ ಮುಳಬಾಗಿಲು ನಗರದ ಅಂಬೇಡ್ಕರ್ ವೃತ್ತದಿಂದ ಸೌಂದರ್ಯ ಸರ್ಕಲ್‌ವರೆಗೆ ಭರ್ಜರಿ ರೋಡ್ ಶೋ ನಡೆಸಿದ ಸಿದ್ದು, ಡಿಕೆ, ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರ ಮತಬೇಟೆಯಾಡಿದರು. ತೆರೆದ ವಾಹನದಲ್ಲಿ 1 ಕಿಲೋ ಮೀಟರ್ ಱಲಿ ನಡೆಸಿ ಮತಯಾಚಿಸಿದರು.

ಪ್ರಚಾರಕ್ಕೂ ಮುನ್ನ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈಗಾಗಲೇ ಪ್ರಚಾರ ಆರಂಭಿಸಿದ್ದೇವೆ. ಇಂದು ಅಧಿಕೃತವಾಗಿ ಚಾಲನೆ ಕೊಟ್ಟಿದ್ದೇವೆ ಎಂದರು. ಬಿಜೆಪಿಯವರು ಸುಳ್ಳಿನ ಮೇಲೆ ಪ್ರಚಾರ ಮಾಡ್ತಿದ್ದಾರೆ. ನಾವು ಸತ್ಯದ ಮೇಲೆ ಪ್ರಚಾರ ಮಾಡ್ತಿದ್ದೇವೆ ಅಂತಾ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಸುಳ್ಳು ಹೇಳಿ ಪ್ರಚಾರ ಮಾಡ್ತಿದ್ದಾರೆ ಅನ್ನೋದನ್ನೇ ಅಸ್ತ್ರ ಮಾಡಿಕೊಂಡು ಪ್ರಚಾರ ಆರಂಭಿಸಿರೋ ಕಾಂಗ್ರೆಸ್ ನಾಯಕರು, ಕಮಲ ಪಡೆ ವಿರುದ್ದ ಗುಡುಗಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಸಚಿವ ಭೈರತಿ ಸುರೇಶ್, ಬಿಜೆಪಿ ಜೆಡಿಎಸ್‌ಗೆ ಸೋಲು ಕಟ್ಟಿಟ್ಟಬುತ್ತಿ ಅಂತಾ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಹಿಂದಿನಿಂದಲೂ ಕುರುಡುಮಲೆ ದೇವಸ್ಥಾನದಿಂದಲೇ ಚುನಾವಣಾ ಪ್ರಚಾರ ಕಾರ್ಯ ಆರಂಭಿಸುತ್ತಿತ್ತು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಇಲ್ಲಿಂದಲೇ ರಣಕಹಳೆ ಮೊಳಗಿಸಿದ್ದ ಕಾಂಗ್ರೆಸ್ 135 ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಸಹ ಇಲ್ಲಿಂದಲೇ ಪಾಂಚಜನ್ಯ ಯಾತ್ರೆ ಆರಂಭಿಸಿ ಗದ್ದುಗೆ ಏರಿದ್ದರು. ಹೀಗಾಗಿ ಕುರುಡುಮಲೆಯಿಂದ ಪ್ರಚಾರ ಆರಂಭಿಸಿದರೆ, ಜಯ ಸಾಧಿಸಬಹುದು ಅನ್ನೋದು ಕಾಂಗ್ರೆಸ್ ನಾಯಕರ ನಂಬಿಕೆ.

ಅಂದಹಾಗೆ ಮಾರ್ಚ್ 29ರಂದೇ ಕುರುಡುಮಲೆಯಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಡಬೇಕಿತ್ತು. ಆದ್ರೆ, ಕೋಲಾರ ಟಿಕೆಟ್ ಕಗ್ಗಂಟು ಕಾಂಗ್ರೆಸ್ ಪಡೆಯನ್ನ ಇಕ್ಕಟ್ಟಿಗೆ ಸಿಲುಕಿಸಿತ್ತು. ಹೀಗಾಗಿ ಪ್ರಜಾಧ್ವನಿ 2.O ಪ್ರಚಾರ ಕಾರ್ಯಕ್ರಮವನ್ನ ಮುಂದೂಡಲಾಗಿತ್ತು.




