- Kannada News Photo gallery Lotus flower meals festival at Abalavadi village in Maddur Taluk in Mandya District celebrated
ಮದ್ದೂರು: 800 ವರ್ಷ ಇತಿಹಾಸದ ದೇವಸ್ಥಾನದಲ್ಲಿ ತಾವರೆ ಎಲೆಯ ಊಟ ವಿಜೃಂಭಣೆಯಿಂದ ನಡೆಯಿತು! ನೀವೂ ನೋಡಿ
ಅದು ಪುರಾಣ ಪ್ರಸಿದ್ದ ದೇವಸ್ಥಾನ. ನೂರಾರು ವರ್ಷಗಳ ಇತಿಹಾಸ ಇರೋ ಆ ದೇವಸ್ಥಾನದಲ್ಲಿ, ಪ್ರತಿ ವರ್ಷ ಆಷಾಢ ಮಾಸದ ಮೂರನೇ ವಾರ, ತೋಪಿನ ತಿಮ್ಮಪ್ಪಸ್ವಾಮಿ ದೇವರಿಗೆ ಹರಿಸೇವೆ ಮಾಡಲಾಗುತ್ತದೆ. ಆದರೆ ಈ ಹರಿ ಸೇವೆಯಲ್ಲಿ ಸಾವಿರಾರು ಭಕ್ತರಿಗೆ ತಾವರೆ ಎಲೆಯ ಊಟವನ್ನ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಈ ತಾವರೆ ಎಲೆ ಊಟದ ಪ್ರಸಾದವನ್ನ ಸವಿಯಲು ಸಹಸ್ರಾರು ಸಂಖ್ಯೆಯ ಭಕ್ತರು ಹತ್ತಾರು ಹಳ್ಳಿಯ ಗ್ರಾಮಸ್ಥರು ಆಗಮಿಸುತ್ತಾರೆ.
Updated on: Jul 10, 2023 | 3:14 PM

ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿರೋ ಭಕ್ತರು. ಲಾಟ್ ಗಟ್ಟಲೇ ಸಂಗ್ರಹಿಸಿರೋ ಅನ್ನ. ದೊಡ್ಡ ದೊಡ್ಡ ಹಂಡೆಯಲ್ಲಿರೋ ಸಾಂಬಾರ್. ಸಾಮೂಹಿಕವಾಗಿ ನೆಲದ ಮೇಲೆ ಕುಳಿತು ತಾವರೆ ಎಲೆಯಲ್ಲಿ ಊಟವನ್ನ ಸೇವಿಸುತ್ತಿರೋ ಸಾವಿರಾರು ಭಕ್ತರು. ಊಟದ ನಂತರ ನೆಲದ ಮೇಲೆ ಇರೋ ತಾವರೆ ಎಲೆಗಳು. ಅಂದಹಾಗೆ ಇಂತಹ ದೃಶ್ಯ ಕಂಡು ಬಂದಿದ್ದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ.

ಹೌದು ಆಬಲವಾಡಿ ಗ್ರಾಮದಲ್ಲಿರೋ ತೋಪಿನ ತಿಮ್ಮಪ್ಪಸ್ವಾಮಿ ದೇವರಿಗೆ ಪ್ರತಿವರ್ಷ ಆಷಾಢ ಮಾಸದ ಮೂರನೇ ವಾರದಂದು ಹರಿ ಸೇವೆ ಮಾಡಲಾಗುತ್ತದೆ.

ಗ್ರಾಮಸ್ಥರೆಲ್ಲ ಸೇರಿಕೊಂಡು ಹಣವನ್ನ ಸಂಗ್ರಹಿಸಿ ಈ ಹರಿಸೇವೆ ಮಾಡುತ್ತಾರೆ. ಈ ಹರಿಸೇವೆಯ ವಿಶೇಷವೆಂದರೇ ತಾವರೆ ಎಲೆಯ ಊಟವೇ ಆಕರ್ಷಣೆ.

ಅಂದಹಾಗೆ ಪ್ರತಿವರ್ಷ ಈ ಹರಿಸೇವೆಯನ್ನ ಆಚರಣೆ ಮಾಡಲಾಗುತ್ತದೆ. ಹತ್ತಾರು ಹಳ್ಳಿಯ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಆಗಮಿಸುವ ಭಕ್ತರಿಗೆ ಸಾಮೂಹಿಕವಾಗಿ ಊಟವನ್ನ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.

ಅದು ಕೂಡ ತಾವರೆಎಲೆಯಲ್ಲಿ ಊಟವನ್ನು ಹಾಕುವುದು ವಿಶೇಷ. ಇದಕ್ಕಾಗಿಯೇ ಸುತ್ತಮುತ್ತಲಿನ ಕೆರೆಗಳಲ್ಲಿ ಸುಮಾರು 50 ಸಾವಿರದಷ್ಟು ತಾವರೆಎಲೆಯನ್ನ ಸಂಗ್ರಹ ಮಾಡಲಾಗುತ್ತದೆ.

ದೇವಸ್ಥಾನದ ಮುಂಭಾಗವೇ ನೆಲದ ಮೇಲೆ ಬೊಗಸೆ ಬೊಗಸೇ ಅನ್ನ, ಸಾಂಬಾರ್ ಅನ್ನ ತಾವರೆ ಎಲೆಗೆ ನೀಡಲಾಗುತ್ತದೆ. ಹೊಟ್ಟೆ ತುಂಬ ಪ್ರಸಾದವನ್ನ ಸ್ವೀಕರಿಸಿದ ಜನರು, ಎಲೆಯಲ್ಲಿ ಸ್ವಲ್ಪಮಟ್ಟಿಗೆ ಅನ್ನ ಸಾಂಬಾರ್ ಬಿಡುತ್ತಾರೆ. ಇದು ವಾಡಿಕೆ ಕೂಡ. ಇದಕ್ಕಾಗಿಯೇ 15 ದಿನದಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತದೆ.

ಅಂದಹಾಗೆ ಸುಮಾರು 800 ವರ್ಷಗಳ ಇತಿಹಾಸ ಇರೋ ಈ ದೇವಸ್ಥಾನಕ್ಕೆ ಅಪಾರ ಪ್ರಮಾಣದ ಭಕ್ತರು ಇದ್ದಾರೆ. ಕಳೆದ ನೂರಾರು ವರ್ಷಗಳಿಂದ ಈ ರೀತಿಯ ಹರಿಸೇವೆಯನ್ನ ಮಾಡಿಕೊಂಡು ಬರಲಾಗುತ್ತಿದೆ. ಇನ್ನು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಬಾಳೆ ಎಲೆಯಲ್ಲಿ ಪ್ರಸಾದವನ್ನ ನೀಡಲಾಗುತ್ತದೆ.

ಆದರೇ ಆಬಲವಾಡಿ ಗ್ರಾಮದ ತೋಪಿನ ತಿಪ್ಪಪ್ಪನ ಸ್ವಾಮಿಯ ಹರಿಸೇವೆಯಲ್ಲಿ ತಾವರೆಎಲೆಯಲ್ಲಿಯೇ ಪ್ರಸಾದವನ್ನ ಯಾಕಾಗಿ ನೀಡುತ್ತಾರೆ ಅಂದರೇ ಲಕ್ಷೀಗೆ ತಾವರೆ ಪ್ರಿಯಾ. ಹೀಗಾಗಿ ತಾವರೆಎಲೆಯಲ್ಲಿ ಊಟವನ್ನ ಪ್ರಸಾದ ರೂಪದಲ್ಲಿ ನೀಡುತ್ತಾರೆ.

ಇನ್ನು ಎಲೆಯಲ್ಲಿಯೇ ಪ್ರಸಾದವನ್ನು ಯಾಕಾಗಿ ಬಿಟ್ಟು ಹೋಗುತ್ತಾರೆ ಎಂದು ಪ್ರಸಾದವನ್ನ ಸೇವಿಸಿದ ಮನೆಯಲ್ಲಿ ಒಳ್ಳೇಯದು ಆಗಲಿ. ಅನ್ನಕ್ಕೆ ಯಾವುದೇ ಸಮಸ್ಯೆ ಆಗದೇ ಹೆಚ್ಚಳವಾಗುತ್ತದೆ ಎಂಬ ನಂಬಿಕೆ. ಇನ್ನು ಇಲ್ಲಿ ಹರಕೆ ಹೊತ್ತಿಕೊಂಡು ಆನಂತರ ಅದು ಈಡೇರಿದ ನಂತರ ದೇವಸ್ಥಾನಕ್ಕೆ ಬಂದು ಊಟಕ್ಕೆ ತುಪ್ಪ ಬಡಿಸುತ್ತಾರೆ.


ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯ ಸ್ವಾಮಿ ಸಹ ನಿನ್ನೆ ಭಾನುವಾರ ದೇವಸ್ಥಾನಕ್ಕೆ ಆಗಮಿಸಿ ತಾವರೆಎಲೆಯಲ್ಲಿ ಪ್ರಸಾದವನ್ನ ಸ್ವೀಕರಿಸಿದ್ರು. ದೂರದ ಊರುಗಳಿಂದ ಅನೇಕ ಭಕ್ತರು ತಾವರೆಎಲೆಯಲ್ಲಿ ಊಟವನ್ನು ಸವಿಯಲೆಂದು ಆಗಮಿಸಿದ್ದರು. ಒಟ್ಟಾರೆ ಶ್ರೀ ತೋಪಿನ ತಿಮ್ಮಪ್ಪನ ಹರಿಸೇವೆ ಇವತ್ತು ಅದ್ದೂರಿಯಾಗಿ ಜರುಗಿತು. ತಾವರೆಎಲೆಯಲ್ಲಿ ಭಕ್ತರು ಊಟದ ರೂಪದಲ್ಲಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.



















