ಬೀದರ್ ಬಡ ರೈತನ ಕೈ ಹಿಡಿದ ನರೇಗಾ: ಬರಡು ಭೂಮಿಯಲ್ಲಿ ತೋಡಿದ್ದ ಬಾವಿಯಲ್ಲಿ ಉಕ್ಕಿದ ಗಂಗೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (NREGA) ಬಡ ಗ್ರಾಮೀಣ ಜನರಿಗೆ ಆರ್ಥಿಕ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ರೈತ ಶಾಮರಾವ್ ಬಿರಾದಾರ ಅವರು NREGA ಯೋಜನೆಯಡಿ 1.50 ಲಕ್ಷ ರೂಪಾಯಿಗಳ ಸಹಾಯ ಪಡೆದು ಬಾವಿ ತೋಡಿಸಿ ತಮ್ಮ ಜಮೀನಿನಲ್ಲಿ ನೀರಾವರಿ ವ್ಯವಸ್ಥೆಯನ್ನು ಸುಧಾರಿಸಿದ್ದಾರೆ.
Updated on:Jul 11, 2025 | 5:52 PM

ಉದ್ಯೋಗ ಖಾತ್ರಿ ಯೋಜನೆ ಬಡವರ ಪಾಲಿನ ಅಕ್ಷಯ ಪಾತ್ರೆಯಂತೆ ಕೆಲಸ ಮಾಡುತ್ತಿದೆ. ರೈತರಿಗೂ ಕೂಡ ಸಾಕಷ್ಟು ಅನುಕೂಲ ಕಲ್ಪಿಸಿದೆ. ಯೋಜನೆಯ ಸದುಪಯೋಗ ಪಡೆದು ಕೃಷಿಯಲ್ಲಿ ಕಾಂತ್ರಿ ಮಾಡುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಿಂದ ಬೀದರ್ ಜಿಲ್ಲೆಯ ಓರ್ವ ರೈತರು ಬರಡು ಭೂಮಿಯಲ್ಲಿ ಬಾವಿ ತೋಡಿದ್ದು, ನೀರು ಚಿಮ್ಮಿದೆ.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಡ ಗ್ರಾಮೀಣ ಭಾಗದ ಜನರಿಗೆ ಬೇಡಿದ್ದನ್ನು ಕೊಡುವ ಅಕ್ಷಯ ಪಾತ್ರೆಯಂತೆ ಕೆಲಸ ಮಾಡುತ್ತಿದೆ. ಈ ಯೋಜನೆಯಿಂದ ಸಾಕಷ್ಟು ಕುಟುಂಬಗಳು ಆರ್ಥಿಕವಾಗಿ ಮೇಲೆ ಬಂದಿದ್ದು ಇಲ್ಲಿ ದುಡಿದ ಹಣದಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಗುಣಮಟ್ಟದ ಆಹಾರ ಕೊಡುತ್ತಿದ್ದಾರೆ. ರೈತರಿಗೂ ಕೂಡ ಉದ್ಯೋಗ ಖಾತ್ರಿ ಯೋಜನೆ ಹತ್ತಾರು ಲಾಭಗಳನ್ನು ಮಾಡಿಕೊಡುತ್ತಿದೆ. ಉದಾಹರಣೆಗೆ, ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋರಾಳ ಗ್ರಾಮದ ರೈತರೊಬ್ಬರು ಬರಡು ಭೂಮಿಯಲ್ಲಿ ಬಾವಿ ತೋಡಿ ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ಸಾಹಿ ರೈತ ಶಾಮರಾವ್ ಬಿರಾದಾರ (55) ಬೇಸಿಗೆಯಲ್ಲಿ ಮೂರು ತಿಂಗಳು ಬೆವರು ಸುರಿಸಿ 24 ಅಡಿ ಆಳ ಬಾವಿ ತೋಡಿದ್ದು. ಅದರಲ್ಲಿ ಭರಪೂರ ನೀರು ಬಂದಿದೆ. ಶಾಮರಾವ್ ಅವರು ನಾಲ್ಕು ಎಕರೆ ಜಮೀನು ಹೊಂದಿದ್ದಾರೆ. ಅದು ಗುಡ್ಡ, ಕಲ್ಲು, ಮುಳ್ಳಿನ ಪೊದೆಗಳಿಂದ ಕೂಡಿತ್ತು. ಅದನ್ನೆಲ್ಲ ತೆಗೆದು ಭೂಮಿಯನ್ನು ಹದ ಮಾಡಿದ್ದಾರೆ. ನರೇಗಾದಡಿ 1.50 ಲಕ್ಷ ರೂ. ನೆರವು ಪಡೆದು 24 ಅಡಿ ಆಳ ಹಾಗೂ 36 ಅಡಿ ಸುತ್ತಳತೆಯ ಬಾವಿ ಕೊರೆದಿದ್ದಾರೆ. ಬಾವಿಯಲ್ಲಿ 12 ಅಡಿಯಷ್ಟು ನೀರಿದೆ. ಇದೇ ನೀರನ್ನು ಬಳಿಸಿಕೊಂಡು ತರಕಾರಿ ಬೆಳೆಸಿ ಹಣ ಘಳಿಸುವ ಪ್ಲ್ಯಾನ್ ಇದೆ ಎಂದು ರೈತ ಶಾಮರಾವ್ ಹೇಳಿದ್ದಾರೆ.

"ಮಳೆಯಾಶ್ರಿತ ಕೃಷಿಯನ್ನು ಮಾಡಿ ವರ್ಷಕ್ಕೆ ಒಂದು ಬೆಳೆಯನ್ನು ಬೆಳೆದರೆ ಪ್ರಯೋಜನವಾಗಲ್ಲ ಎಂದು ಅರಿತ ರೈತರ ಶಾಮರಾವ್ ಅವರು ಹೇಗಾದರೂ ಮಾಡಿ ಜಮೀನಿನಲ್ಲಿ ಒಂದು ಬಾವಿ ಅಥವಾ ಬೋರ್ ವೆಲ್ ಹಾಕಿಸಬೇಕೆಂದು ನಿರ್ಧರಿಸಿದರು. ಹೀಗಾಗಿ ಅವರು ಗ್ರಾಮ ಪಂಚಾಯತಿ ಪಿಡಿಓಗೆ ಮನವಿ ಸಲ್ಲಿಸಿದರು. ನಮಗೆ ಉದ್ಯೋಗ ಖಾತ್ರಿ ಯೋಜನೆಯ ಅಡಿ ಬಾವಿಕೊರೆಸಿ ಕೊಡಿ ಎಂದು ಮನವಿ ಮಾಡಿಕೊಂಡರು. ರೈತ ಶಾಮರಾವ್ ಅವರ ಮನವಿಗೆ ಸ್ಪಂದಿಸಿದ ಎಕಲಾರ್ ಗ್ರಾಮ ಪಂಚಾಯತಿ ಪಿಡಿಓ ನರೇಗಾ ಯೋಜನೆಯಡಿ ಕಾರ್ಮಿಕರ ಸಹಾಯದಿಂದ ಬಾವಿ ತೋಡಿಸಿಕೊಟ್ಟಿದ್ದಾರೆ.

ಬಾವಿಯ ಮೇಲ್ಭಾಗದ ಸುತ್ತಲೂ ಎರಡು ಅಡಿಯಷ್ಟು ಗೋಡೆ ಕಟ್ಟಲು 2 ಲಕ್ಷ ರೂ. ಖರ್ಚು ಮಾಡಿದ್ದಾರೆ. ರೈತ ಶಾಮರಾವ್ ತೋಡಿದ ಬಾವಿಯಲ್ಲಿ ಭರಪೂರ ನೀರು ಬಂದಿದೆ, ಬಾವಿಗೆ ವಿದ್ಯುತ್ ಸಂಪರ್ಕ ಹಾಗೂ ಮೋಟರ್ ವ್ಯವಸ್ಥೆಯಾದರೆ ಈರುಳ್ಳಿ, ತರಕಾರಿ ಬೆಳೆದು ವರ್ಷಕ್ಕೆ 4 ರಿಂದ 5 ಲಕ್ಷದವರೆಗೂ ಲಾಭ ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ರೈತ ಶಾವರಾವ್ ಅವರು ಇದ್ದಾರೆ.

ನರೇಗಾ ಯೋಜನೆ ಲಕ್ಷಾಂತರ ಬಡವರ ಹೊಟ್ಟೆ ತುಂಬಿಸುತ್ತಿದೆ. ರೈತರು ಕೂಡ ಈ ಯೋಜನೆಯ ಲಾಭ ಪಡೆದುಕೊಂಡು ಕೃಷಿಯಲ್ಲಿ ಹೊಸ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಿಂದ ಚೆಕ್ ಡ್ಯಾಂ ನಿರ್ಮಾಣ, ಬಾವಿ ತೋಡುವುದು, ಕೃಷಿ ಹೊಂಡ ನಿರ್ಮಾಣ ಹೀಗೆ ಹತ್ತಾರು ಕೆಲಸಗಳು ನಡೆಯುತ್ತಿವೆ.
Published On - 5:50 pm, Fri, 11 July 25



