
‘ರಾಮಾ ರಾಮಾ ರೇ’ ಸಿನಿಮಾ ಖ್ಯಾತಿಯ ಕಲಾವಿದ ನಟರಾಜ್ ಅವರಿಗೆ ಅನೇಕ ಅವಕಾಶಗಳು ಸಿಗುತ್ತಿವೆ. ಈಗ ಅವರ ‘ಮ್ಯಾನ್ ಆಫ್ ದಿ ಮ್ಯಾಚ್’, ‘ಮಾರೀಚ’ ಹಾಗೂ ‘ಕುಬುಸ’ ಸಿನಿಮಾಗಳು ರಿಲೀಸ್ಗೆ ಸಜ್ಜಾಗಿವೆ. ಈ ಚಿತ್ರಗಳ ಜೊತೆಗೆ ಮತ್ತೆ ಮೂರು ಸಿನಿಮಾಗಳನ್ನು ನಟರಾಜ್ ಒಪ್ಪಿಕೊಂಡಿದ್ದಾರೆ.

ಕನ್ನಡದ ಖ್ಯಾತ ಕಥೆಗಾರ ಕುಂ. ವೀರಭದ್ರಪ್ಪ ಅವರು ಬರೆದ ‘ಕುಬುಸ’ ಕಥೆ ಇದೇ ಹೆಸರಿನಲ್ಲಿ ಸಿನಿಮಾವಾಗುತ್ತಿದೆ. ಈ ಚಿತ್ರದಲ್ಲಿ ನಟರಾಜ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಎರಡು ಶೇಡ್ನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ರಮೇಶ್ ರೇಣುಕಾ ರಾಮ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ನಟರಾಜ್ ಅವರ ಜನ್ಮದಿನದ ಸಲುವಾಗಿ ‘ಕುಬುಸ’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ನಟ ಡಾಲಿ ಧನಂಜಯ ಅವರು ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾಗೆ ವಿ. ಶೋಭಾ ಶರ್ಮಾ ಬಂಡವಾಳ ಹಾಕಿದ್ದು, ಚೇತನ್ ಶರ್ಮಾ ಛಾಯಾಗ್ರಹಣ, ಪ್ರವೀಣ್ ಚಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ನಟರಾಜ್ ಅಭಿನಯದ ‘ಮಾರೀಚ’ ಸಿನಿಮಾಗೆ ಸುಧೀರ್ ಶಾನ್ ಬಾಗ್ ಸಿಂಗ್ ಆಕ್ಷನ್-ಕಟ್ ಹೇಳಿದ್ದಾರೆ. ಗೌತಮ್ ಜೋಶ್ನಾ ನಿರ್ಮಾಣ ಮಾಡಿದ್ದಾರೆ. ಗಣೇಶ್ ಛಾಯಾಗ್ರಹಣ ಹಾಗೂ ಸುನಾದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದೆ.

ನಟರಾಜ್ ಅವರು ಮೂಲತಃ ಚಿಕ್ಕಮಗಳೂರಿನ ಕಡೂರಿನವರು. ಕಾನೂನು ಪದವಿ ಪಡೆದರೂ ಕೂಡ ಅವರನ್ನು ಹೆಚ್ಚಾಗಿ ಸೆಳೆದಿದ್ದು ಬಣ್ಣದ ಲೋಕ. ‘ರಾಮಾ ರಾಮಾರೇ’ ಚಿತ್ರದಿಂದ ಯಶಸ್ಸು ಪಡೆದ ಅವರು ಈಗ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.