- Kannada News Photo gallery Manchester United plan to sue and ban Cristiano Ronaldo over controversial interview
ಕ್ರಿಸ್ಟಿಯಾನೋ ರೊನಾಲ್ಡೊಗೆ ನಿಷೇಧ! ಫಿಫಾ ವಿಶ್ವಕಪ್‌ಗೂ ಮುನ್ನ ಕಾಲ್ಚೆಂಡಿನ ಚತುರನಿಗೆ ಬಿಗ್ ಶಾಕ್
Cristiano Ronaldo: ರೊನಾಲ್ಡೊ ಅವರನ್ನು ಕ್ಲಬ್‌ನಿಂದ ಬ್ಯಾನ್ ಮಾಡಲು ಚಿಂತಿಸಿದೆ. ಅದರಂತೆ ವಿಶ್ವಕಪ್ ಬಳಿಕ ಕ್ಲಬ್‌ನ ತರಬೇತಿ ಮೈದಾನಕ್ಕೆ ಬರದಂತೆ ರೊನಾಲ್ಡೊಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
Updated on: Nov 19, 2022 | 1:33 PM

ಕತಾರ್‌ನಲ್ಲಿ ನಡೆಯುತ್ತಿರುವ ಫುಟ್‌ಬಾಲ್ ವಿಶ್ವಕಪ್‌ಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಪಂದ್ಯಾವಳಿಯು ನವೆಂಬರ್ 20 ಭಾನುವಾರದಿಂದ ಪ್ರಾರಂಭವಾಗಲಿದೆ. ಆದರೆ ಈ ವಿಶ್ವಕಪ್ನಲ್ಲಿ ಭಾಗವಹಿಸಲಿರುವ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಹಾಗೂ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದು, ಇದೀಗ ನಿಷೇಧದ ಹಂತಕ್ಕೆ ಬಂದಿದ್ದಾರೆ.

ವಾಸ್ತವವಾಗಿ, ವಿಶ್ವಕಪ್ ಪ್ರಾರಂಭವಾಗುವ ಮೊದಲು, ರೊನಾಲ್ಡೊ ಪ್ರಸಿದ್ಧ ಪತ್ರಕರ್ತ ಪಿಯರ್ಸ್ ಮೋರ್ಗಾನ್ ಅವರಿಗೆ ಸಂದರ್ಶನವೊಂದನ್ನು ನೀಡಿದ್ದರು. ಇದರಲ್ಲಿ ಅವರು ತಮ್ಮ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಮ್ಯಾನೇಜರ್ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದರು. ಇದು ಫುಟ್ಬಾಲ್ ಲೋಕದಲ್ಲಿ ದೊಡ್ಡ ಬಿರುಗಾಳಿಯನ್ನು ಸೃಷ್ಟಿಸಿತು.

ಸಂದರ್ಶನದಲ್ಲಿ ಆರೋಪಗಳ ಸುರಿಮಳೆಗೈದಿದ್ದ ರೊನಾಲ್ಡೊ, ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಹೊಸ ಮ್ಯಾನೇಜರ್ ಎರಿಕ್ ಟ್ಯಾನ್ ಹಾಗ್ ಸೇರಿದಂತೆ ಹಲವಾರು ಅಧಿಕಾರಿಗಳು ಹೊಸ ಸೀಸನ್ನ ಆರಂಭದ ಮೊದಲು ನನ್ನನ್ನು ಕ್ಲಬ್‌ನಿಂದ ಹೊರಹಾಕಲು ಬಯಸಿದ್ದರು. ಹಾಗೆಯೇ ಕ್ಲಬ್‌ನ ಮಾಲೀಕರಾದ ಗ್ಲೇಜರ್ ಕುಟುಂಬವು ಕ್ಲಬ್‌ನ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅಲ್ಲದೆ ಕ್ಲಬನ್ನು ಅವರು ಕೇವಲ ಹಣ ಗಳಿಸುವ ಸಾಧನವಾಗಿ ಮಾತ್ರ ನೋಡುತ್ತಾರೆ ಎಂದು ಆರೋಪಿಸಿದ್ದರು.

ಮ್ಯಾನೇಜರ್ ಟೆನ್ ಹಾಗ್ ಜೊತೆ ನನ್ನ ಸಂಬಂಧವು ಮೊದಲಿನಿಂದಲೂ ಉತ್ತಮವಾಗಿಲ್ಲ. ಮ್ಯಾನೇಜರ್ ನನಗೆ ಗೌರವ ಕೊಡುವುದಿಲ್ಲ. ಹಾಗಾಗಿ ನಾನು ಕೂಡ ಅವರನ್ನು ಗೌರವಿಸುವುದಿಲ್ಲ. ಅಲ್ಲದೆ ಏಪ್ರಿಲ್‌ನಲ್ಲಿ ತನ್ನ ನವಜಾತ ಮಗು ಸಾವನ್ನಪ್ಪಿದಾಗ ಕ್ಲಬ್ ಅಧಿಕಾರಿಗಳು ಅನಾಗರೀಕರಂತೆ ನಡೆದುಕೊಂಡಿದ್ದರು ಎಂದು ರೊನಾಲ್ಡೊ ಆರೋಪಿಸಿದ್ದರು.

ರೊನಾಲ್ಡೊ ಅವರ ಈ ಆರೋಪ ಫುಟ್ಬಾಲ್ ಲೋಕದಲ್ಲಿ ಸಂಚಲನ ಮೂಡಿಸಿದ್ದು, ಇದೀಗ ಕ್ಲಬ್ ಕೂಡ ರೊನಾಲ್ಡೊ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ನವೆಂಬರ್ 18, ಶುಕ್ರವಾರದಂದು ಮ್ಯಾಂಚೆಸ್ಟರ್ ಯುನೈಟೆಡ್ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು, ರೊನಾಲ್ಡೊ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಂಡಿತ್ತು.

ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್ ವರದಿಯ ಪ್ರಕಾರ ಕ್ಲಬ್ ತನ್ನ ಹೇಳಿಕೆಯಲ್ಲಿ, ರೊನಾಲ್ಡೊ ಕ್ಲಬ್‌ಗೆ ತಿಳಿಸದೆ ಸಂದರ್ಶನ ನೀಡಿದ್ದಾರೆ. ಅಲ್ಲದೆ, ಅವರು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಕ್ಲಬ್ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ವಕೀಲರನ್ನು ನಿಯೋಜಿಸಿದೆ. ಹಾಗೆಯೇ ಅವರನ್ನು ಕ್ಲಬ್‌ನಿಂದ ಬ್ಯಾನ್ ಮಾಡಲು ಚಿಂತಿಸಿದೆ. ಅದರಂತೆ ವಿಶ್ವಕಪ್ ಬಳಿಕ ಕ್ಲಬ್‌ನ ತರಬೇತಿ ಮೈದಾನಕ್ಕೆ ಬರದಂತೆ ರೊನಾಲ್ಡೊಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಜೊತೆ ಸುದೀರ್ಘ ಒಡನಾಟವನ್ನು ಹೊಂದಿದ್ದಾರೆ. 2003 ರಲ್ಲಿ ತನ್ನ 18 ನೇ ವಯಸ್ಸಿನಲ್ಲಿ ಕ್ಲಬ್ ಸೇರಿದ್ದ ರೊನಾಲ್ಡೊಗೆ ಇಲ್ಲಿಂದಲೇ ಮನ್ನಣೆ ಸಿಕ್ಕಿತು. ಆದಾಗ್ಯೂ, 2009 ರಲ್ಲಿ ಈ ಕ್ಲಬ್ ತೋರಿದ್ದ ರೊನಾಲ್ಡೊ ರಿಯಲ್ ಮ್ಯಾಡ್ರಿಡ್ ಕ್ಲಬ್‌ಗೆ ಸೇರ್ಪಡೆಗೊಂಡಿದ್ದರು. ನಂತರ 2021 ರಲ್ಲಿ ಮತ್ತೆ ಈ ಕ್ಲಬ್‌ಗೆ ಮರಳಿದ ರೊನಾಲ್ಡೊಗೆ, ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ವಾರಕ್ಕೆ 5 ಲಕ್ಷ ಪೌಂಡ್‌ಗಳ ಸಂಬಳವನ್ನು ನೀಡಲಾಗುತ್ತಿದೆ. ಅಂದರೆ ಸುಮಾರು 4.87 ಕೋಟಿ ರೂ. ಹಣವನ್ನು ಸಂಬಳದ ರೂಪದಲ್ಲಿ ರೊನಾಲ್ಡೊ ಪಡೆಯುತ್ತಿದ್ದಾರೆ.
