ದಾವಣಗೆರೆ: ಕೊರೊನಾ ಸಾಂಕ್ರಾಮಿಕ ಕಾಯಿಲೆ ತೀವ್ರವಾಗಿ ಸಮಸ್ಯೆ ತಂದೊಡ್ಡಿದ್ದ ಕಾಲದಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಜನರ ಮನಗೆದ್ದಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಇದೀಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಸಚಿವ ಆರ್. ಅಶೋಕ್ ದಾವಣೆಗೆರೆಗೆ ಭೇಟಿ ನೀಡಿದಾಗ ರೇಣುಕಾಚಾರ್ಯ ಅವರಿಗೆ ಜೊತೆಯಾಗಿದ್ದಾರೆ.
ಗ್ರಾಮ ವಾಸ್ತವ್ಯದ ವೇಳೆ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ್ದಾರೆ. ಉಪಹಾರ ಸೇವನೆಯ ಬಳಿಕ ಎಂ.ಪಿ. ರೇಣುಕಾಚಾರ್ಯ ತಟ್ಟೆಯನ್ನು ಕೂಡ ತೊಳೆದು ಇಡುವ ಮೂಲಕ ಗಮನ ಸೆಳೆದಿದ್ದಾರೆ.
ಇಲ್ಲಿನ ಕುಂದೂರು ಗ್ರಾಮದ ದಲಿತರ ಮನೆಯಲ್ಲಿ ಉಪಹಾರ ಸೇವನೆ ಮಾಡಿದ ಬಳಿಕ ರೇಣುಕಾಚಾರ್ಯ ತಟ್ಟೆ ತೊಳೆದಿಟ್ಟಿದ್ದಾರೆ. ತಾನು ಶಾಸಕ ಎಂಬ ಯಾವುದೇ ಅಹಂಕಾರ ಇಲ್ಲದೆ ಅವರು ಈ ಕೆಲಸ ಮಾಡಿದ್ದಾರೆ. ಸಾಮಾನ್ಯನಂತೆ ನಡೆದುಕೊಂಡಿದ್ದಾರೆ. ಶಾಸಕರ ಈ ಕೆಲಸ ಮನೆಯವರಿಗೆ ಹಾಗೂ ಅಲ್ಲಿದ್ದವರಿಗೆ ಅಚ್ಚರಿ ಉಂಟುಮಾಡಿದೆ. ಈ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಚಿವರು ಟ್ವೀಟ್ ಮಾಡಿದ್ದು, ದಲಿತರ ಮನೆಯಲ್ಲಿ ಉಪಹಾರ ಮಾತ್ರವಲ್ಲದೆ, ಊಟಕ್ಕೆ ಕೂಡ ಬುತ್ತಿ ಕಟ್ಟಿಸಿಕೊಂಡಿರುವ ಬಗ್ಗೆ ಬರೆದುಕೊಂಡಿದ್ದಾರೆ. ಆರ್. ಅಶೋಕ್, ದಲಿತರ ಮನೆಯಲ್ಲಿ ಊಟ ಕಟ್ಟಿಸಿಕೊಂಡು ಅವರ ಕೇರಿಗಳಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳ ಕುರಿತು ಮನವಿ ಪಡೆದರು ಎಂದು ತಿಳಿದುಬಂದಿದೆ.
ಹಿಂದಿನ ದಿನ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಜಿಲ್ಲೆಯ ಸೊರಹೊನ್ನೆ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪೂರ್ಣಕುಂಭ ಹಾಗೂ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಸ್ವಾಗತಿಸಲಾಗಿತ್ತು. ಈ ವೇಳೆ ರೇಣುಕಾಚಾರ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.